ಹುಕ್ಕೇರಿ: ಡಿಸಿಸಿ ಬ್ಯಾಂಕ್ ಆರ್ಥಿಕ ವ್ಯವಸ್ಥೆ ಬಲಪಡಿಸಿ ರಾಷ್ಟ್ರ ಮಟ್ಟಕ್ಕೇರಿಸುವ ಸಂಕಲ್ಪ ಹೊಂದಿದ್ದೇನೆ ಎಂದು ಅಧ್ಯಕ್ಷ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಪಟ್ಟಣದ ಪಿಕೆಪಿಎಸ್‌ನಲ್ಲ್ಲಿ ಮಂಗಳವಾರ ಪತ್ತು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರ ಅನುಕೂಲಕ್ಕಾಗಿ ಹೊಸ ಯೋಜನೆ ಜಾರಿಗೆ ತರಲಾಗಿದೆ. ಬ್ಯಾಂಕ್‌ನಿಂದ ಸಿಗುವ ಸೇವೆಗಳನ್ನು ತಳಮಟ್ಟದವರೆಗೆ ತಲುಪಿಸುವುದು ಪ್ರಮುಖ ಗುರಿಯಾಗಿದೆ. ಕೃಷಿ ಉತ್ಪಾದನೆ ಹೆಚ್ಚಳಕ್ಕೆ ಸಹಕಾರಿಯಾಗಲು ಟ್ರ್ಯಾಕ್ಟರ್, ನೀರಾವರಿಗೆ ಪೈಪ್‌ಲೈನ್ ಅಳವಡಿಕೆ ಮತ್ತು ಹೈನುಗಾರಿಕೆಗೆ ಸಾಲ ನೀಡುತ್ತಿದ್ದೇವೆ. ಸರ್ಕಾರ ಮತ್ತು
ಬ್ಯಾಂಕ್‌ನ ಪ್ರತಿ ಯೋಜನೆಯನ್ನು ರೈತರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇನೆ. ಸಹಕಾರ ಸಂಘಗಳ ಮೂಲಕ ರೈತರ ಆರ್ಥಿಕ ಸಬಲೀಕರಣಕ್ಕೆ ನಿರಂತರವಾಗಿ ಶ್ರಮಿಸುವುದಾಗಿ ತಿಳಿಸಿದರು.
ಸಂಗಮ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ ಮಾತನಾಡಿ, ಸಹಕಾರ ಸಂಸ್ಥೆಗಳು ರೈತರ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಪಿಕೆಪಿಎಸ್ ಸಾಲ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕಬ್ಬು ಬೆಳೆಗೆ ರೈತರು ಹೆಚ್ಚಿನ ಒತ್ತು ನೀಡಬೇಕು ಎಂದರು.
ಮಾಜಿ ಸಚಿವ ಶಶಿಕಾಂತ ನಾಯಕ, ಸಂಘದ ನಿರ್ದೇಶಕರಾದ ಬಸಗೌಡ ಪಾಟೀಲ, ಗಿರೀಶ ಪಾಟೀಲ, ಪಾರವ್ವ ಲಠ್ಠಿ, ಮಹಾದೇವ ಖುಬನ್ನಗೋಳ, ಮುಖಂಡರಾದ ರವಿ ಕರಾಳೆ, ಮಹಾವೀರ ಬಾಗಿ, ಚಿದಾನಂದ ಕಿಲ್ಲೇದಾರ, ವಕೀಲ ಭೀಮಸೇನ ಬಾಗಿ ಇತರರಿದ್ದರು. ಗಿರೀಶ ಪಾಟೀಲ ಸ್ವಾಗತಿಸಿದರು. ಶಿವಾನಂದ ಅಲಗರಾವತ ನಿರೂಪಿಸಿದರು.