ಚಿಕ್ಕೋಡಿ: ಗ್ಯಾರಂಟಿ ಯೋಜನೆಗಳ ಬೆನ್ನುಹತ್ತಿ ರಾಜ್ಯ ಸರ್ಕಾರ ದಿವಾಳಿಯಾಗಿದೆ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದ್ದು, ಎಷ್ಟು ಹುದ್ದೆ ಭರ್ತಿ ಮಾಡಲಾಗುತ್ತದೆ ಎಂಬ ಬಗ್ಗೆ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಕೇಶವ ಕಲಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 2.50 ಲಕ್ಷಕ್ಕೂ ಅಧಿಕ ಖಾಲಿ ಹುದ್ದೆಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಹೇಗೆ ಆಡಳಿತ ನಡೆಸಲಿದೆ.
ನಿರುದ್ಯೋಗ ಸಮಸ್ಯೆ ಯುವಜನರನ್ನು ಕಂಗೆಡಿಸಿದೆ. ಖಾಲಿ ಹುದ್ದೆ ಭರ್ತಿ ಮಾಡಬೇಕೆಂದು ಯುವಸಮೂಹ ಧಾರವಾಡದಲ್ಲಿ ಹೋರಾಟ ನಡೆಸಿದರೂ ಸರ್ಕಾರ ಎಚ್ಚೆತ್ತುಕೊಳ್ಳದಿರುವುದು ವಿಪರ್ಯಾಸ ಎಂದರು. ಕಾಂಗ್ರೆಸ್ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ‘ಸರ್ಕಾರದ ನಡಿಗೆ ಕೃಷ್ಣೆ ಕಡೆಗೆ’ ಎಂದು ಘೋಷಣೆ ಮಾಡಿತ್ತು. ಆದರೆ, ಇದುವರೆಗೂ ಯಾವುದೇ ಪ್ರಮುಖ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿಲ್ಲ.
ನೀರಾವರಿ ಯೋಜನೆಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಿಲ್ಲ. ಸರ್ಕಾರ ಸಂಪೂರ್ಣ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕಕ್ಕೆ 14 ನೀರಾವರಿ ಯೋಜನೆಗಳನ್ನು ಮಂಜೂರು ಮಾಡಿದ್ದರು. ಕಾಂಗ್ರೆಸ್ ಸರ್ಕಾರ ಆ ಯೋಜನೆಗಳಿಗೆ ಅಗತ್ಯ ಹಣ ಬಿಡುಗಡೆ ಮಾಡಿಲ್ಲ ಎಂದು ದೂರಿದರು.
ರಾಜ್ಯ ಸರ್ಕಾರದ ಶೇ.80 ಹಣ ಗ್ಯಾರಂಟಿ ಯೋಜನೆಗಳಿಗೆ ತೆರಳಿದರೆ, ಕೇವಲ ಶೇ.20 ಅಭಿವೃದ್ಧಿ ಕಾರ್ಯಗಳಿಗೆ ಉಳಿಯುತ್ತಿದೆ. ಇಷ್ಟು ಕಡಿಮೆ ಹಣದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ. ಅಭಿವೃದ್ಧಿ ವಿಷಯದಲ್ಲಿ ಉತ್ತರ ಕರ್ನಾಟಕ ನಿರ್ಲಕ್ಷಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.