

ಬೆಳಗಾವಿ: ಅಪರಾಧ ತನಿಖೆಯನ್ನು ವೇಗ, ನಿಖರ ಹಾಗೂ ವೈಜ್ಞಾನಿಕವಾಗಿ ನಡೆಸುವ ಉದ್ದೇಶದಿಂದ ಸರ್ಕಾರ ಪೊಲೀಸ್ ಇಲಾಖೆಗೆ ಒದಗಿಸಿರುವ ಅತ್ಯಾಧುನಿಕ ಮೊಬೈಲ್ ವಿಧಿ ವಿಜ್ಞಾನ (ಫೋರೆನ್ಸಿಕ್) ವಾಹನ (ಎಂಎಫ್‌ವಿ) ಶುಕ್ರವಾರ ನಗರಕ್ಕೆ ಆಗಮಿಸಿದೆ.
ಅಪರಾಧ ನಡೆದ ಸ್ಥಳದಲ್ಲೇ ಪ್ರಮುಖ ಸಾಕ್ಷ್ಯ ಸಂಗ್ರಹಿಸಿ ಸಂರಕ್ಷಿಸುವ ವ್ಯವಸ್ಥೆ ಹೊಂದಿವೆ. ಪ್ರತಿ ವ್ಯಾನ್‌ನಲ್ಲಿ 16ಕ್ಕೂ ಹೆಚ್ಚು ಸುಧಾರಿತ ಫೋರೆನ್ಸಿಕ್ ಉಪಕರಣ ಅಳವಡಿಸಲಾಗಿದ್ದು, ಕ್ರೈಂ ಸೀನ್ ಪ್ರೊಟೆಕ್ಟ್, ರಕ್ತ ಹಾಗೂ ವೀರ್ಯ ಮಾದರಿ ಸಂಗ್ರಹ, ಡಿಎನ್‌ಎ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ ಸಾಕ್ಷ್ಯ ಸಂಗ್ರಹ, ಅಗ್ನಿ ಮತ್ತು ಸ್ಫೋಟಕ ವಸ್ತುಗಳ ಪರೀಕ್ಷಾ, ಮಾದಕ ವಸ್ತುಗಳ ಪತ್ತೆ ಕಿಟ್, ಡಿಜಿಟಲ್ ಸಾಕ್ಷ್ಯ ಸಂಗ್ರಹ ವ್ಯವಸ್ಥೆ, ಸ್ಟೀರಿಯೋ ಮೈಕ್ರೋಸ್ಕೋಪ್, ಬೆರಳಚ್ಚು ಹಾಗೂ ಹೆಜ್ಜೆ ಗುರುತು ಸಂಗ್ರಹ ಸಾಧನಗಳು ಸೇರಿದಂತೆ ಹಲವು ಆಧುನಿಕ ಉಪಕರಣಗಳು ಲಭ್ಯವಿವೆ.
ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ಮೊಬೈಲ್ ಫೋರೆನ್ಸಿಕ್ ವ್ಯಾನ್‌ಗಳ ಸೇರ್ಪಡೆಯಿಂದ ಪೊಲೀಸ್ ಇಲಾಖೆಯ ತನಿಖಾ ಸಾಮರ್ಥ್ಯ ವೃದ್ಧಿಯಾಗಲಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ತಿಳಿಸಿದ್ದಾರೆ.