ಕೆರೆ ತುಂಬಿಸಿ, ಬೆಳೆ ಉಳಿಸಿ, ನೀರಿಗೆ ಆದ್ಯತೆ ನೀಡಿ

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಸತೀಶ ಜಾರಕಿಹೊಳಿ ಮಾತನಾಡಿದರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಸತೀಶ ಜಾರಕಿಹೊಳಿ ಮಾತನಾಡಿದರು.
Published on
ಬೆಳಗಾವಿ :ಜಿಲ್ಲೆಯ ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ನೀರಿಗೆ, ಕೆರೆ ತುಂಬಿಸಲು ಮೊದಲ ಆದ್ಯತೆ ನೀಡುವುದರ ಜತೆಗೆ ರೈತರ ಬೆಳೆಗಳನ್ನು ಉಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ನೀರಿ ನಿರ್ವಹಣೆಗಾಗಿ ಕೃಷಿ, ತೋಟಗಾರಿಕೆ, ನೀರಾವರಿ ಇಲಾಖೆ ಒಳಗೊಂಡ ಅಧಿಕಾರಿಗಳ ಸಮಿತಿ ರಚನೆ ಮಾಡಬೇಕು ಎಂದು ಶಾಸಕರು ಒತ್ತಾಯಿಸಿದರು.
ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯ ನೀರಾವರಿ, ಕುಡಿಯುವ ನೀರು, ಕೃಷಿ, ಬೆಳೆ ವಿಮೆ, ಅರಣ್ಯ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಶಾಸಕರು, ವಿವಿಧ ಇಲಾಖೆ ಅಧಿಕಾರಿಗಳು ಸುದೀರ್ಘ ಚರ್ಚೆ ನಡೆಸಿದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.17ರಷ್ಟು ಮಳೆ ಕೊರತೆಯಾಗಿದ್ದರಿಂದ ಜಲಾಶಯಗಳಲ್ಲಿ ನಿರೀಕ್ಷಿತ ಪ್ರಮಾನದಲ್ಲಿ ನೀರು ಸಂಗ್ರಹವಾಗಿಲ್ಲ. ಕೆರೆ, ಕಟ್ಟೆಗಳು ತುಂಬಿಲ್ಲ. ಘಟಪ್ರಭಾ ಜಲಾಶಯದಲ್ಲಿ 48.87 ಟಿಎಂಸಿ ನೀರು ಲಭ್ಯವಿದ್ದು, ಸದ್ಯಕ್ಕೆ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಮಲಪ್ರಭಾ ಜಲಾಶಯದಲ್ಲಿ 18 ಟಿಎಂಸಿ ನೀರು ಲಭ್ಯವಿರುವುದರಿಂದ ಹುಬ್ಬಳ್ಳಿ-ಧಾರವಾಡ, ಬೈಲಹೊಂಗಲ, ಸವದತ್ತಿ, ಹಾಗೂ ಗದಗ ಜಿಲ್ಲೆಯ ವಿವಿಧ ಭಾಗಗಳ ಕುಡಿಯುವ ನೀರಿನ ಅವಶ್ಯಕತೆ ಪೂರೈಸುವ ದೃಷ್ಟಿಯಿಂದ ನೀರಿನ ನಿರ್ವಹಣೆ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಮಾತನಾಡಿ, ಮಲಪ್ರಭಾ ಜಲಾಶಯದಲ್ಲಿ ನೀರಿನ ಲಭ್ಯತೆ, ನೀರು ಬಳಕೆಗೆ ವಾಸ್ತವತೆ ಅರಿತುಕೊಳ್ಳಲು ವಿವಿಧ ಇಲಾಖೆ ಅಧಿಕಾರಿಗಳನ್ನು ಒಳಗೊಂಡಿರುವ ಸಮಿತಿ ರಚನೆ ಮಾಡಿ. ಲಭ್ಯವಿರುವ 18 ಟಿಎಂಸಿಯಲ್ಲಿ ಕುಡಿಯುವ ನೀರಿಗಾಗಿ 4 ಟಿಎಂಸಿ ನೀರು ಮೀಸಲಿಡಬೇಕು. ಅಲ್ಲದೆ, ಜಿಲ್ಲೆಯಲ್ಲಿ ಇರುವ ಕೆರೆಗಳ ಸಂಖ್ಯೆ, ಅವುಗಳ ಸ್ಥಿತಿ ಹಾಗೂ ಹೂಳೆತ್ತುವ ಅಗತ್ಯದ ಕುರಿತು ಜಿಪಂ, ಸಣ್ಣ ನೀರಾವರಿ ಮತ್ತು ಬೃಹತ್ ನೀರಾವರಿ ಇಲಾಖೆಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು. ಬಳಿಕ ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಪಂ ಸಿಇಒ ರಾಹುಲ ಶಿಂಧೆ, ಎಸ್‌ಪಿ ಕೆ.ರಾಮರಾಜನ್,ಪೊಲೀಸ್ ಆಯುಕ್ತ ಪ್ರಕಾಶ ನಿಕ್ಕಂ ಇತರರಿದ್ದರು.
........................
ಬಾಕ್ಸ್
ವಾಸ್ತವ ಪರಿಸ್ಥಿತಿ ತಿಳಿಯಲು ಸಮಿತಿ ರಚಿಸಿ
ಮಲಪ್ರಭಾ ಜಲಾಶಯದಲ್ಲಿ ನೀರಿನ ಲಭ್ಯತೆ ಹಾಗೂ ರೈತರ ವಾಸ್ತವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಿದ್ದಾಗ ಮಾತ್ರ ನೀರು ಹರಿಸುವ ವ್ಯವಸ್ಥೆ ಮಾಡಬೇಕು.ನೀರಾವರಿ, ಕೃಷಿ, ತೋಟಗಾರಿಕೆ ಹಾಗೂ ಹೆಸ್ಕಾಂ ಇಲಾಖೆಗಳ ಅಧಿಕಾರಿಗಳ ತಂಡದಿಂದ ವಾಸ್ತವ ಪರಿಸ್ಥಿತಿಯ ವರದಿ ಪಡೆದುಕೊಳ್ಳಬೇಕು. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಕಳೆದ ಹಂಗಾಮಿನ ಬೆಳೆ ವಿಮೆ ಪರಿಹಾರದಲ್ಲಿ ಕೇವಲ ಶೇ.25ರಷ್ಟು ಮಾತ್ರ ಬಿಡುಗಡೆಯಾಗಿದೆ. ಶೇ.75ರಷ್ಟು ಮೊತ್ತ ಇನ್ನೂ ಬಾಕಿ ಉಳಿದಿದ್ದು ಕೂಡಲೇ ಪರಿಹಾರ ವಿತರಣೆಗೆ ಕ್ರಮ ವಹಿಸಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಒತ್ತಾಯಿಸಿದರು.
........................
ಬಾಕ್ಸ್
ಸವದತ್ತಿ ಕ್ಷೇತ್ರಕ್ಕೆ ಅನುದಾನ ನೀಡಿ
ಈಗಾಗಲೇ ಅಮೃತ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಯರಗಟ್ಟಿ, ಮುನವಳ್ಳಿ ಪಟ್ಟಣಕ್ಕೆ ದಿನದ 24 ಗಂಟೆ ಕುಡಿಯುವ ನೀರು ಸೌಲಭ್ಯ ಕಲ್ಪಿಸುವ ಯೋಜನೆಗೆ 40 ಕೋಟಿ ರೂ. ಅನುದಾನವಿದೆ.ಆದರೆ, ಜಾಕವೆಲ್, ಪೈಪಲೈನ್ ಹೆಚ್ಚು ಖರ್ಚು ಆಗಲಿದೆ. ಹೆಚ್ಚುವರಿಯಾಗಿ 35 ಕೋಟಿ ರೂ. ಅಗತ್ಯವಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.ಡಿಸಿಸಿ ಬ್ಯಾಂಕ್ ಮೂಲಕ ವಿಮೆ ಪಾವತಿಸಿರುವ ರೈತರ ಖಾತೆಗಳಿಗೆ ಪರಿಹಾರ ಜಮೆಯಾಗಿದ್ದರೂ, ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ವಿಮೆ ಪಾವತಿಸಿದವರಿಗೆ ಪರಿಹಾರ ದೊರೆಯದಿರುವ ತಾರತಮ್ಯವನ್ನು ನಿವಾರಿಸಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಆಗ್ರಹಿಸಿದರು.
...........................
ಬಾಕ್ಸ್
ವಿದ್ಯುತ್ ಸಮಸ್ಯೆ ಪರಿಹರಿಸಿ
ರಾಯಬಾಗ ವಿಧಾನಸಭಾ ಕ್ಷೇತ್ರದ ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ಯೋಜನೆ ಕಾಮಗಾರಿಗೆ ಅಡ್ಡಿಯಾಗಿ ಸಮಸ್ಯೆ ಇತ್ಯರ್ಥ ಪಡಿಸಬೇಕು. ವಿದ್ಯುತ್ ಅಸಮರ್ಪಕ ಪೂರೈಕೆದಿಂದಾಗಿ ರೈತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಜಿಲ್ಲಾಧಿಕಾರಿ, ಸಚಿವರು ಮಧ್ಯಪ್ರವೇಶಿಸಿ ನಿರಂತರ ವಿದ್ಯುತ್ ಪೂರೈಕೆಗೆ ನಿರ್ದೇಶಿಸಬೇಕು. ಹೆಸ್ಕಾಂ ಇಂಜಿನಿಯರ್‌ಗಳು ಸಭೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಶಾಸಕ ದುರ್ಯೋಧನ ಐಹೊಳೆ ಆಕ್ರೋಶ ವ್ಯಕ್ತಪಡಿಸಿದರು.
............................
ಬಾಕ್ಸ್
ಸೊಯಾಬಿನ್ ಬೆಳೆಗೆ ವಿಮೆ ಕಲ್ಪಿಸಿ
ಮುಂಗಾರಿನಲ್ಲಿ ಮಳೆ ಕೊರತೆಯಿಂದ ಉದ್ದು, ಸೋಯಾಬಿನ್ ಸೇರಿ ವಿವಿಧ ಬೆಳಗಳು ಹಾನಿಯಾಗಿವೆ. ಆದರೆ, ಬೆಳೆ ವಿಮೆ ಪಟ್ಟಿಗೆ ಸೋಯಾಬಿನ್ ಬೆಳೆ ಕೈ ಬಿಡಲಾಗಿದೆ. ಈ ಬೆಳೆಗಾರರಿಗೂ ಬೆಳೆ ವಿಮೆ ಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿಗಳು ವಿಮೆ ಕಂಪನಿಗಳ ಜತೆಗೆ ಮಾತುಕತೆ ನಡೆಸಬೇಕು ಎಂದು ಶಾಸಕ ಅಪ್ಪಾಸಾಹೇಬ ಪಾಟೀಲ ಒತ್ತಾಯಿಸಿದರು.
................
ಕೋಟ್ಸ್
ಬರ ಪಟ್ಟಿಗೆ ಬೆಳಗಾವಿ ಜಿಲ್ಲೆ ಸೇರ್ಪಡೆಗೆ ನಿಯಮಗಳು ಅಡ್ಡಿಯಾಗಿದ್ದು, ಸರ್ಕಾರ ಮಟ್ಟದಲ್ಲಿ ಮತ್ತೊಮ್ಮೆ ಚರ್ಚಿಸಲಾಗುವುದು. ಪ್ರತಿ ಭಾರಿ ಕೆಡಿಪಿ ಸಭೆಗೆ ಶಾಸಕರು ಏಕೆ ಗೈರಾಗಿದ್ದಾರೆ ಅವರನ್ನೇ ಕೇಳಬೇಕು.
- ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ
...........
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net