ಪುತ್ರಿಯೊಂದಿಗೆ ಸಲುಗೆ ಕೆಲಸಗಾರನ ಹತ್ಯೆಗೈದ ತಂದೆ

ಆರೋಪಿ ಬಂಧನ, ವಿಚಾರಣೆ
Murder
Murder
Published on: 

ಬೆಂಗಳೂರು: ಮನೆಯಲ್ಲಿ ಪುತ್ರಿಯೊಂದಿಗೆ ಸಿಕ್ಕಿಬಿದ್ದ ಕೇರಳ ಮೂಲದ ಕೆಲಸಗಾರನನ್ನು ತಂದೆಯೇ ಕ್ರಿಕೆಟ್ ಬ್ಯಾಟ್ ಹಾಗೂ ಪೈಪ್‌ನಿಂದ ಹಲ್ಲೆ ಮಾಡಿ ಕೊಲೆಮಾಡಿರುವುದು ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕಿರಣ್(24) ಕೊಲೆಯಾದ ಯುವಕ. ಕೃತ್ಯ ಎಸಗಿದ ಆನಂದ್‌ರಾಜ್(45) ಎಂಬಾತನನ್ನು ಬಂಧಿಸಲಾಗಿದೆ. ನ.3ರಂದು ಕೋಗಿಲು ಬಂಡೆ ರಸ್ತೆಯಲ್ಲಿ ರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಮಿಳುನಾಡು ಮೂಲದ ಆನಂದ್‌ರಾಜ್ ಕಳೆದ 10 ವರ್ಷಗಳಿಂದ ಯಲಹಂಕದ ಕೋಗಿಲು ಬಂಡೆ ರಸ್ತೆಯಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳ ಜತೆ ವಾಸವಾಗಿದ್ದರು. ಕಾರ್ನ್ ಕಾರ್ಟ್(ಪಾಪ್ ಕಾರ್ನ್)ತಯಾರಿಸಿ ಮಾರಾಟ ಮಾಡಿಕೊಂಡಿದ್ದ. ಆತನೊಂದಿಗೆ ಕೇರಳ ಮೂಲದ ಕಿರಣ್ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ. ಆನಂದ್‌ರಾಜ್ ಹಿರಿಯ ಪುತ್ರಿ ಹಾಗೂ ಕಿರಣ್ ನಡುವೆ ಸ್ನೇಹ ಬೆಳೆದಿತ್ತು. ಈ ವಿಚಾರ ತಿಳಿದ ಆನಂದ್‌ರಾಜ್ ಅದನ್ನು ಖಚಿತಪಡಿಸಿಕೊಳ್ಳಲು ಊರಿಗೆ ಹೋಗುವ ನಾಟಕ ಮಾಡಿದ್ದ.

ಮೈಸೂರಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಹಿರಿಯ ಪುತ್ರಿ ರಜೆ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಮನೆಗೆ ಬಂದಿದ್ದಳು. ಕೆಲಸಗಾರ ಕಿರಣ್ ಕೂಡ ಆಕೆಯ ಜತೆ ನಿರಂತರ ಮೊಬೈಲ್ ಸಂಪರ್ಕದಲ್ಲಿದ್ದ. ನ.3ರಂದು ಬೆಳಗ್ಗೆ ಆನಂದ್‌ರಾಜ್ ಪತ್ನಿ ಜತೆ ತಮಿಳುನಾಡಿಗೆ ಹೋಗುವುದಾಗಿ ಮಗಳಿಗೆ ಹೇಳಿ ಮನೆಯಿಂದ ಹೊಗಿದ್ದರು. ಆದರೆ, ಕೇವಲ 1 ಗಂಟೆಯಲ್ಲೇ ಮನೆಗೆ ವಾಪಸ್ ಬಂದಿದ್ದಾರೆ. ಬಳಿಕ ಮನೆಯ ರೂಮ್‌ನಲ್ಲಿ ಪುತ್ರಿ ಜತೆ ಕಿರಣ್ ಇರುವುದನ್ನು ಗಮನಿಸಿದ ಆನಂದ್‌ರಾಜ್, ಪುತ್ರಿ ಮತ್ತು ಕಿರಣ್ ಮೇಲೆ ಹಲ್ಲೆ ನಡೆಸಿದ್ದಾನೆ.

ಮಗಳನ್ನು ಚಿಕ್ಕಬಳ್ಳಾಪುರದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಕಳುಹಿಸಿ, ಕಿರಣ್‌ನನ್ನು ಮನೆಯಲ್ಲಿಯೇ ಕೂಡಿಹಾಕಿ ಕ್ರಿಕೆಟ್ ಬ್ಯಾಟ್ ಮತ್ತು ಪೈಪ್‌ನಿಂದ ಹಲ್ಲೆಗೈದಿದ್ದಾನೆ. ಕಾಲು, ಕೈ, ಹೊಟ್ಟೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಕಿರಣ್ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾನೆ. ಅದನ್ನು ಕಂಡು ಗಾಬರಿಕೊಂಡ ಆರೋಪಿ, ಆಟೋ ಕರೆಯಿಸಿ ಕಿರಣ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಜಿ.ಕೆ.ಮಿಥುನ್ ಮಾಹಿತಿ ನೀಡಿದ್ದಾರೆ.