ರೈತರಿಗೆ ಸೂಕ್ತ ಪರಿಹಾರ ನೀಡಲಿ

ಬಿಜಗುಪ್ಪಿ ಗ್ರಾಮದ ಜಮೀನುಗಳಲ್ಲಿ ಶಾಸಕ ಅಶೋಕ ಪಟ್ಟಣ ಹಾನಿಗೊಳಗಾದ ಬೆಳೆ ವೀಕ್ಷಿಸಿದರು. ಶ್ರೀನಿವಾಸ ಚಿಮ್ಮಲಗಿ, ಪ್ರಕಾಶ ಮುಗಳಖೋಡ, ಶಿದ್ಲಿಂಗಪ್ಪ ಸಿಂಗಾರಗೊಪ್ಪ, ಬಸನಗೌಡ ಪ್ಯಾಟಿಗೌಡ್ರ, ಕೃಷ್ಣಗೌಡ ಪಾಟೀಲ ಇತರರಿದ್ದರು.
ಬಿಜಗುಪ್ಪಿ ಗ್ರಾಮದ ಜಮೀನುಗಳಲ್ಲಿ ಶಾಸಕ ಅಶೋಕ ಪಟ್ಟಣ ಹಾನಿಗೊಳಗಾದ ಬೆಳೆ ವೀಕ್ಷಿಸಿದರು. ಶ್ರೀನಿವಾಸ ಚಿಮ್ಮಲಗಿ, ಪ್ರಕಾಶ ಮುಗಳಖೋಡ, ಶಿದ್ಲಿಂಗಪ್ಪ ಸಿಂಗಾರಗೊಪ್ಪ, ಬಸನಗೌಡ ಪ್ಯಾಟಿಗೌಡ್ರ, ಕೃಷ್ಣಗೌಡ ಪಾಟೀಲ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅಶೋಕ ಪಟ್ಟಣ ತಾಕೀತು
  • ವಿವಿಧೆಡೆ ಬೆಳೆಹಾನಿ ಪರಿಶೀಲನೆ
ರಾಮದುರ್ಗ:

ಮಳೆ ಕೊರತೆಯಿಂದ ತಾಲೂಕಿನ ಬಟಕುರ್ಕಿ, ಕದಾಂಪುರ, ಸಾಲಾಪುರ, ಚಿಪ್ಪಲಕಟ್ಟಿ ಹಾಗೂ ಬಿಜಗುಪ್ಪಿ ಗ್ರಾಮದಲ್ಲಿ ಹಾನಿಗೊಳಗಾದ ಬೆಳೆಗಳನ್ನು ಶಾಸಕ ಅಶೋಕ ಪಟ್ಟಣ ಮಂಗಳವಾರ ವೀಕ್ಷಿಸಿದರು.

ತಾಲೂಕಿನಲ್ಲಿ ಮಳೆ ಅಭಾವದಿಂದ ಹೆಸರು, ಮೆಕ್ಕೆಜೋಳ ಹಾಗೂ ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿವೆ. ಈಗಾಗಲೇ ರಾಜ್ಯಾದ್ಯಂತ ಬೆಳೆ ಸಮೀಕ್ಷೆ ನಡೆಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅಧಿಕಾರಿಗಳಿಗೆ ಆದೇಶಿದ್ದಾರೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ನಿಖರ ಸಮೀಕ್ಷೆ ನಡೆಸಿ, ವರದಿ ನೀಡಬೇಕು. ಸಮೀಕ್ಷೆಯಲ್ಲಿ ಲೋಪ ಕಂಡುಬಂದಲ್ಲಿ ಅಧಿಕಾರಿಗಳನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಶಾಸಕ ಪಟ್ಟಣ ಎಚ್ಚರಿಸಿದರು.
ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ ಚಿಮ್ಮಲಗಿ ಮಾತನಾಡಿ, ತಾಲೂಕಿನಲ್ಲಿ ಹೆಸರು 24,851, ಮೆಕ್ಕೆಜೋಳ 14,610, ತೊಗರಿ 1,932, ಸೂರ್ಯಕಾಂತಿ 655 ಹಾಗೂ 540 ಹೆಕ್ಟೇರ್‌ಗಳಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಹೆಸರು 23,600, ಮೆಕ್ಕೆಜೋಳ 9,100, ತೊಗರಿ 950, ಸೂರ್ಯಕಾಂತಿ 350 ಹಾಗೂ 275 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆಯ ಜಂಟಿ ಸಮೀಕ್ಷೆ ಬಳಿಕ ನಿಖರ ಬೆಳೆಹಾನಿ ಪ್ರಮಾಣ ಲಭ್ಯವಾಗಲಿದೆ ಎಂದು ತಿಳಿಸಿದರು.
ತೋಟಗಾರಿಕೆ ಸಹಾಯಕ ನಿರ್ದೇಶಕ ಪ್ರಕಾಶ ಮುಗಳಖೋಡ ಮಾತನಾಡಿ, ಈ ಬಾರಿ ತಾಲೂಕಿನಾದ್ಯಂತ ಬಿತ್ತನೆಯಾದ 4,200 ಹೆಕ್ಟೇರ್ ಪ್ರದೇಶದ ಈರುಳ್ಳಿ ಪೈಕಿ 1,250 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ. ತೋಟಗಾರಿಕಾ ಬೆಳೆಗಳ ಸಮೀಕ್ಷೆ ನಡೆಸಿ, ನಿಖರವಾದ ಬೆಳೆಹಾನಿ ಪ್ರದೇಶ ಗುರುತಿಸಲಾಗುವುದು ಎಂದು ವಿವರಿಸಿದರು.
ಮುಖಂಡರಾದ ಶಿದ್ಲಿಂಗಪ್ಪ ಸಿಂಗಾರಗೊಪ್ಪ, ಬಸನಗೌಡ ಪ್ಯಾಟಿಗೌಡ್ರ, ಕೃಷ್ಣಗೌಡ ಪಾಟೀಲ, ಪೀರು ತಳವಾರ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ರೈತರು ಇದ್ದರು.

ನೈಜ ಸಮೀಕ್ಷೆ ಕೈಗೊಳ್ಳಲಿ

ಸಮರ್ಪಕ ಮಳೆಯಾಗದೆ ಬೆಳೆಗಳು ಒಣಗಿವೆ. ಸರ್ಕಾರ ಮಟ್ಟದಲ್ಲಿ ತಾಲೂಕಿನ ಪರಿಸ್ಥಿತಿ ಪ್ರಸ್ತಾಪಿಸಬೇಕು. ಬಿತ್ತನೆ ಬೀಜ-ಗೊಬ್ಬರ, ಕೃಷಿ ಚಟುವಟಿಕೆಗಳಿಗೆ ರೈತರು ಮಾಡಿದ ವೆಚ್ಚವಾದರೂ ದೊರೆಯುವಂತೆ ಸೂಕ್ತ ಬೆಳೆಹಾನಿ ಪರಿಹಾರ ತಲುಪುವಂತೆ ಕ್ರಮ ತೆಗೆದುಕೊಳ್ಳಬೇಕು. ಅಧಿಕಾರಿಗಳು ಎಲ್ಲ ರೈತರ ಜಮೀನುಗಳಿಗೆ ಭೇಟಿ ನೀಡಿ ನೈಜ ಸಮೀಕ್ಷೆ ಕೈಗೊಳ್ಳಬೇಕೆಂದು ರೈತರು ಶಾಸಕ ಅಶೋಕ ಪಟ್ಟಣ ಅವರನ್ನು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net