ಮಲಪ್ರಭಾ ಕಾಲುವೆ ಬಳಿ ರೈತರ ರಸ್ತೆತಡೆ ಪ್ರತಿಭಟನೆ

ಸವದತ್ತಿ ತಾಲೂಕಿನ ‌ಮಲಪ್ರಭಾ ಕಾಲುವೆ ಬಳಿ ರೈತರ ಪ್ರತಿಭಟನೆ ನಡೆಸಿದರು.
ಸವದತ್ತಿ ತಾಲೂಕಿನ ‌ಮಲಪ್ರಭಾ ಕಾಲುವೆ ಬಳಿ ರೈತರ ಪ್ರತಿಭಟನೆ ನಡೆಸಿದರು.
Published on
ಸವದತ್ತಿ; ತಾಲೂಕಿನ ಬಲದಂಡೆಯ ಕಾಲುವೆ ಸಮೀಪದಲ್ಲಿ ನರಗುಂದ, ನವಲಗುಂದ, ರಾಮದುರ್ಗ, ರೋಣ ಹಾಗೂ ಸವದತ್ತಿ ಭಾಗದ ರೈತರು ಮತ್ತು ಹಸಿರು ಸೇನೆಯ ಕಾರ್ಯಕರ್ತರು ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸವದತ್ತಿ- ಗೋಕಾಕ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು.
ರೈತ ಸಂಘದ ಮುಖಂಡರಾದ ಲಕ್ಷ್ಮಣ ಬಕ್ಕಾಯಿ, ಶಂಕರ ಅಂಬಲಿ ಹಾಗೂ ಮಹಾಂತೇಶ ಪಂಚೆನ್ನವರ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ವಿರೂಪಾಕ್ಷ ‌ಮಾಮನಿ ಮಾತನಾಡಿ, ಹಿಂಗಾರು ಬೆಳೆಗಳು ಈಗ ಕೈಗೆ ಬಂದ ಹಂತದಲ್ಲಿದ್ದು, ಈ ಸಮಯದಲ್ಲಿ ನೀರು ನಿಲ್ಲಿಸಿದರೆ ಕೈಗೆ ಬಂದದ್ದು ಬಾಯಿಗೆ ಬರದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಆದ್ದರಿಂದ ಕನಿಷ್ಠ ಮಾರ್ಚ್ 15ರವರೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ನೀರಾವರಿ ಇಲಾಖೆಯ ಧಾರವಾಡ ವೃತ್ತದ ಅಧೀಕ್ಷಕ ಅಭಿಯಂತರ ಮಹಾವೀರ ಗಣಿ ಮಾತನಾಡಿ, ಜಲಾಶಯದ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಜೂನ್–ಜುಲೈ ತಿಂಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ಆದರೂ ರೈತರ ಸಂಕಷ್ಟವನ್ನು ಗಮನಿಸಿ ಫೆಬ್ರವರಿ 25ರವರೆಗೆ ನೀರು ಬಿಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು. ಇದಕ್ಕೆ ಆಕ್ರೋಶಗೊಂಡ ರೈತರು, ಬೆಳೆಗಳು ಹಾಳಾಗುವ ಭೀತಿ ಇದೆ ಎಂದು ಹೇಳಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
ನಂತರ ಅರ್ಧ ಗಂಟೆ ಸಮಯ ಪಡೆದು ಅಧಿಕಾರಿಗಳು ಮಲಪ್ರಭಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷೆ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಳಿಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಇ. ಸುಭಾಸ ನಾಯ್ಕ ಮಾತನಾಡಿ, ಫೆಬ್ರವರಿ 28ರವರೆಗೆ ಮಾತ್ರ ನೀರು ಬಿಡಲು ಸಾಧ್ಯ ಎಂದು ತಿಳಿಸಿದರು. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ರೈತರು ಕಾರ್ಖಾನೆಗಳಿಗೆ ನೀರು ಕೊಡಲು ರೈತರ ಬೆಳೆಗಳನ್ನು ಬಲಿ ಕೊಡಲಾಗುತ್ತಿದೆ ಎಂದು ಆರೋಪಿಸಿದರು.
ಮಧ್ಯಪ್ರವೇಶಿಸಿದ ರಾಮದುರ್ಗ ಡಿವೈಎಸ್ಪಿ ಚಿದಂಬರ ಮಡಿವಾಳರ, ಸಮಿತಿಯ ಸಭೆ ಕರೆಯಿಸಿ ರೈತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದರು. ಇದಕ್ಕೆ ರೈತರು ಒಪ್ಪಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ಶಂಕರಗೌಡ ಪಾಟಿಲ, ಮುತ್ತು ಕೌಜಗೇರಿ, ಗದಗ ಜಿಲ್ಲಾ ಅಧ್ಯಕ್ಷ ಬಸವರಾಜ ಸಾಬಳೆ, ಗಂಗಪ್ಪ ಕಾಲವಾಡ, ಮಹಾಂತೇಶ ಹೆಬಸೂರ, ಕೆಂಚನಗೌಡ ರಾಯನಗೌಡ್ರ, ಇಸ್ಮಾಲ ನಧಾಪ, ನಾಗನಗೌಡ ರೋಣದ, ಹೆಮರಡ್ಡಿ ಹುಚರಡ್ಡಿ, ಬಾಳಮ್ಮ ಮುದೇನೂರ, ಸವಿತಾ ಮುದೇನೂರ, ಸಂಗೀತಾ ಪೂಜೇರ ವಿವಿಧ ತಾಲೂಕುಗಳಿಂದ ಆಗಮಿಸಿದ ನೂರಾರು ರೈತರು ಉಪಸ್ಥಿತರಿದ್ದರು.
ರಾತ್ರಿಯೇ ಸ್ಥಳದಲ್ಲಿ ವಾಸ್ತವ್ಯ ಹೂಡಿದ್ದ ರೈತರು ಟ್ರ್ಯಾಕ್ಟರ್‌ಗಳನ್ನು ಅಡ್ಡಗಟ್ಟಿ ರಸ್ತೆ ಬಂದ್ ಮಾಡಿದ್ದರಿಂದ ಯಲ್ಲಮ್ಮ ದೇವಸ್ಥಾನದ ಭಕ್ತರು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪರದಾಡಿದರು. ಪಿಐ ಸುರೇಶ ಬೆಂಡೆಗುಂಬಳ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಒದಗಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net