ಗೀತಾಸಾರ ಮಾನವಕುಲಕ್ಕೆ ಮಾರ್ಗದರ್ಶಕ

ಬೆಳಗಾವಿಯಲ್ಲಿ ಶನಿವಾರ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದಿಂದ ಏರ್ಪಡಿಸಿದ್ದ ಭಗವದ್ಗೀತೆ ಅಭಿಯಾನದ ಸ್ಪರ್ಧೆ ವಿಜೇತರೊಂದಿಗೆ ವಿನೋದ ದೇಶಪಾಂಡೆ, ಪರಮೇಶ್ವರ ಹೆಗಡೆ, ಜಯತೀರ್ಥ ಸವದತ್ತಿ, ಎಂ.ಕೆ.ಹೆಗಡೆ ಇತರರಿದ್ದಾರೆ.
ಬೆಳಗಾವಿಯಲ್ಲಿ ಶನಿವಾರ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದಿಂದ ಏರ್ಪಡಿಸಿದ್ದ ಭಗವದ್ಗೀತೆ ಅಭಿಯಾನದ ಸ್ಪರ್ಧೆ ವಿಜೇತರೊಂದಿಗೆ ವಿನೋದ ದೇಶಪಾಂಡೆ, ಪರಮೇಶ್ವರ ಹೆಗಡೆ, ಜಯತೀರ್ಥ ಸವದತ್ತಿ, ಎಂ.ಕೆ.ಹೆಗಡೆ ಇತರರಿದ್ದಾರೆ.
Published on
ಬೆಳಗಾವಿ: ಭಗವದ್ಗೀತೆ ಮಾನವಕುಲಕ್ಕೆ ಮಾರ್ಗದರ್ಶನ ಮಾಡುವ ಗ್ರಂಥ. ಹೀಗಾಗಿ, ಪ್ರತಿಯೊಬ್ಬರ ಜೀವನಕ್ಕೂ ಇದು ಅನ್ವಯವಾಗುತ್ತದೆ ಎಂದು ಕರಿಯರ್ ಎಕ್ಸಲ್ ನಿರ್ದೇಶಕ, ನಿವೃತ್ತ ಪ್ರಾಧ್ಯಾಪಕ ವಿನೋದ ದೇಶಪಾಂಡೆ ಅಭಿಪ್ರಾಯಪಟ್ಟರು.
ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ವತಿಯಿಂದ ನಗರದ ಸಂತಮೀರಾ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಭಗವದ್ಗೀತೆ ಅಭಿಯಾನದ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಭಗವದ್ಗೀತೆ ಬೇರೆಲ್ಲ ಗ್ರಂಥಗಳ ಸಮಾಗಮವಿದ್ದಂತೆ. ಅದನ್ನು ಓದಿದರೆ ಎಲ್ಲ ವೇದ, ಪುರಾಣಗಳನ್ನೂ ಓದಿದಂತೆ. ಬದುಕಿನ ದಾರಿದೀಪ ಅದು. ಮೂಲತಃ ಅದರಲ್ಲಿ ಒಂದು ಲಕ್ಷ ಶ್ಲೋಕಗಳಿದ್ದು, ಈಗ 700ಕ್ಕೆ ಇಳಿದಿದೆ. ಪ್ರತಿ ಸಲ ಓದಿದಾಗಲೂ ಅದರಲ್ಲಿ ಹೊಸದನ್ನು ಕಾಣಬಹುದು ಎಂದರು.
ಪಾಲಿಕೆ ಸದಸ್ಯ ಜಯತೀರ್ಥ ಸವದತ್ತಿ ಮಾತನಾಡಿ, ಕೃಷ್ಣನ ಮಹಿಮೆ ಅಪಾರವಾಗಿದೆ. ಭಗವದ್ಗೀತೆ ಪಠಣ ಮಾಡಿದವರಿಗೆ ಜೀವನದಲ್ಲಿ ಜಯ ಸಿಕ್ಕೇ ಸಿಗುತ್ತದೆ. ತಂದೆ-ತಾಯಿ, ಹಿರಿಯರಿಗೆ ಗೌರವ ನೀಡುವ ಸಂಸ್ಕಾರವನ್ನು ಮಕ್ಕಳಿಗೆ ಕಲಿಸಬೇಕು ಎಂದರು.
ಭಗವದ್ಗೀತೆ ಅಭಿಯಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಪರಮೇಶ್ವರ ಹೆಗಡೆ, ಭಗವದ್ಗೀತೆ ದೇವರ ಸಂದೇಶ. ಬೇರೆ ದೇಶಗಳಲ್ಲಿ ಭಗವದ್ಗೀತೆ ಮತ್ತು ಸಂಸ್ಕೃತ ಭಾಷೆ ಕುರಿತು ಹೆಚ್ಚು ಮಹತ್ವ ನೀಡಲಾಗುತ್ತಿದೆ. ಆದರೆ, ನಮ್ಮಲ್ಲಿ ಅದು ಕಡಿಮೆ ಆಗುತ್ತಿದೆ. ಮನಸ್ಸನ್ನು ಕೆಡಿಸುವ ಚಟುವಟಿಕೆಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ 2007ರಿಂದ ಭಗವದ್ಗೀತೆ ಅಭಿಯಾನ ನಡೆಸಿಕೊಂಡು ಬರುತ್ತಿದೆ ಎಂದು ವಿವರಿಸಿದರು.
ಭಗವದ್ಗೀತೆ ಅಭಿಯಾನ ಸಮಿತಿ ಕಾರ್ಯದರ್ಶಿ ಎಂ.ಕೆ.ಹೆಗಡೆ, ಸಂಚಾಲಕ ಸುಬ್ರಹ್ಮಣ್ಯ ಭಟ್, ಸಂತಮೀರಾ ಶಾಲೆ ಆಡಳಿತಾಧಿಕಾರಿ ಆರ್.ಕೆ.ಕುಲಕರ್ಣಿ, ಪ್ರಾಚಾರ್ಯೆ ಸುಜಾತಾ ದ್ತರದಾರ ಇತರರಿದ್ದರು.
ವಿಜೇತರು: ಕಂಠಪಾಠ ಸ್ಪರ್ಧೆಯ ಪ್ರಾಥಮಿಕ ವಿಭಾಗದಲ್ಲಿ ಕೌಸ್ತುಭ ಭಟ್ ಪ್ರಥಮ, ಮೇಹುಲ್ ಶೀಲವಂತ ದ್ವಿತೀಯ, ಪ್ರೌಢ ವಿಭಾಗದಲ್ಲಿ ಶ್ರಾವ್ಯ ಭಟ್ ಪ್ರಥಮ, ಗೌತಮಿ ಕಂಗ್ರಾಳಕರ ದ್ವಿತೀಯ, ಭಾಷಣಸ್ಪರ್ಧೆ ಪ್ರಾಥಮಿಕ ವಿಭಾಗದಲ್ಲಿ ಅಶ್ವಿಕ ಹಡಪದ ಪ್ರಥಮ, ಚಿನ್ಮಯಿ ಜೋಶಿ ದ್ವಿತೀಯ, ಪ್ರೌಢ ವಿಭಾಗದಲ್ಲಿ ಶಾಂಭವಿ ಸ್ವಾಮಿ ಪ್ರಥಮ, ಶ್ರೀನಿಧಿ ಯಲ್ಗೋಡ ದ್ವಿತೀಯ ಬಹುಮಾನ ಪಡೆದರು. ಸವಿತಾ ಜೋಶಿ, ಮಂಗಲಾ ಮೈತ್ರಿ, ಸಂಧ್ಯಾ ಭಟ್, ಗೀತಾ ಪರಮೇಶ್ವರ ಹೆಗಡೆ, ವಿದ್ಯಾ ಗುರು, ಗೀತಾ ಸತೀಶ ಹೆಗಡೆ, ವೆಂಕಟೇಶ ಉಪಾಧ್ಯಾಯ, ಚೈತ್ರಾ ಸಾಗರ ಹೆಗಡೆ ನಿರ್ಣಾಯಕರಾಗಿದ್ದರು. ಸುಜಾತಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net