ಬೆಳಗಾವಿ: ಅಷ್ಟಮ ಋಷಿಯಾಗಿ ಕಳೆದ 41 ವರ್ಷಗಳಲ್ಲಿ 316 ಸಂಸ್ಥೆಗಳನ್ನು ಹುಟ್ಟು ಹಾಕಿ ಜಗತ್ತಿನಾದ್ಯಂತ ಕೆಎಲ್‌ಇ ಸಂಸ್ಥೆಯ ಹೆಸರನ್ನು ರಾರಾಜಿಸುವಂತೆ ಮಾಡಿದ ಡಾ.ಪ್ರಭಾಕರ ಕೋರೆಯವರ ಕಾರ್ಯ ಅವಿಸ್ಮರಣೀಯ ಹಾಗೂ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಕಾರ್ಯ ಎಂದು ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಹೇಳಿದರು.
ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆಎಲ್‌ಇ ಸೊಸೈಟಿಯ 110ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಸಪ್ತರ್ಷಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಏಳು ಜನ ಶಿಕ್ಷಕರು, ಬೆಳಗಾವಿಯಲ್ಲಿ ಕೆಎಲ್‌ಇ ಸಂಸ್ಥೆಯನ್ನು ಹುಟ್ಟುಹಾಕುವ ಮೂಲಕ ಕನ್ನಡದ ಬೀಜ ಬಿತ್ತಿದರು.
ಇವರ ನಿಸ್ವಾರ್ಥ ಸೇವೆ ಇಡೀ ಸಮಾಜಕ್ಕೆ ಹೊಸ ಪ್ರಗತಿಯ ಹೆದ್ದಾರಿ ನಿರ್ಮಿಸಿದೆ ಎಂದರು.ಕೇಂದ್ರದ ವಿಜ್ಞಾನಿ ಡಾ.ಎಸ್.ಎಸ್.ಹಿರೇಮಠ ಮಾತನಾಡಿ, ಸಂಸ್ಥೆ ನಡೆದು ಬಂದ ದಾರಿ ವಿವರಿಸಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಬೇಸಾಯಶಾಸ್ತ್ರ ಪ್ರಾಧ್ಯಾಪಕ ಡಾ.ಸುನೀಲ ಎಸ್.ನೂಲಿ, ಕೇಂದ್ರದ ಸಿಬ್ಬಂದಿ ಎಸ್.ಎಂ.ವಾರದ, ಪ್ರವೀಣ ಯಡಹಳ್ಳಿ, ಡಾ.ಭಾವಿನಿ ಪಾಟೀಲ, ಡಾ.ಗುರುರಾಜ ಕೌಜಲಗಿ, ಶಂಕರಗೌಡ ಪಾಟೀಲ, ವಿನೋದ ಕೋಚಿ, ಮಂಜುನಾಥ ಪಿ.ಐ., ಬಸವರಾಜ ಅಮ್ಮಿನಬಾವಿ, ವೀಣಾ ಬನ್ನೂರ ಇತರರಿದ್ದರು.