ಚಳಿಗಾಲ ಅಧಿವೇಶನ ಯಶಸ್ಸಿಗೆ ಶಿಸ್ತುಬದ್ಧ ಸಿದ್ಧತೆ ಅಗತ್ಯ

 ಬೆಳಗಾವಿ ಸುವರ್ಣ ಸೌಧದಲ್ಲಿ ಬುಧವಾರ ಅಧಿವೇಶನ ಪೂರ್ವಸಿದ್ಧತೆ ಸಭೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿದರು. ಭೂಷಣ ಬೋರಸೆ, ಡಾ.ಭೀಮಾಶಂಕರ ಗುಳೇದ, ರಾಹುಲ ಶಿಂಧೆ ಇದ್ದರು
ಬೆಳಗಾವಿ ಸುವರ್ಣ ಸೌಧದಲ್ಲಿ ಬುಧವಾರ ಅಧಿವೇಶನ ಪೂರ್ವಸಿದ್ಧತೆ ಸಭೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿದರು. ಭೂಷಣ ಬೋರಸೆ, ಡಾ.ಭೀಮಾಶಂಕರ ಗುಳೇದ, ರಾಹುಲ ಶಿಂಧೆ ಇದ್ದರು
Published on
ಬೆಳಗಾವಿ: ಚಳಿಗಾಲ ಅಧಿವೇಶನಕ್ಕೆ ಸಂಬಂಧಿಸಿ ರಚಿಸಿದ ಸಮಿತಿ, ಉಪ ಸಮಿತಿಗಳು ತಮಗೆ ನೀಡಲಾಗಿರುವ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಅಧಿವೇಶನ ಯಶಸ್ವಿಗೊಳಿಸಲು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್‌ರೋಷನ್ ಸೂಚಿಸಿದರು.
ಸುವರ್ಣ ವಿಧಾನಸೌಧದಲ್ಲಿ ಬುಧವಾರ ಜರುಗಿದ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಸತಿ, ಊಟೋಪಹಾರ, ಸಾರಿಗೆ ಮತ್ತಿತರ ವ್ಯವಸ್ಥೆಗಳನ್ನು ಖಚಿತಪಡಿಸಿಕೊಂಡು ಯಾವುದೇ ಲೋಪಗಳಿಗೆ ಆಸ್ಪದ ನೀಡದೇ ಪರಸ್ಪರ ಸಮನ್ವಯದೊಂದಿಗೆ ಕೆಲಸ ಮಾಡಬೇಕು. ಅಧಿವೇಶನ ಕಾರ್ಯಕ್ಕೆ ನಿಯೋಜಿತ ಅಧಿಕಾರಿ, ಸಿಬ್ಬಂದಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ವೀಕ್ಷಣೆಗೆ ಬರುವ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಮುಖ್ಯ ದ್ವಾರದಿಂದ ಸುವರ್ಣ ವಿಧಾನಸೌಧದವರೆಗೆ ಕರೆತರಲು ನಿಯಮಿತವಾಗಿ ಮಿನಿಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಶಾಸಕರು, ಅಧಿಕಾರಿ, ಸಿಬ್ಬಂದಿಗೆ ಸೂಕ್ತ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡಬೇಕು. ಸುವರ್ಣ ವಿಧಾನಸೌಧದಲ್ಲಿ ಸಚಿವರು, ಶಾಸಕರು, ಅಧಿಕಾರಿ, ಸಿಬ್ಬಂದಿಗೆ ಪ್ರತ್ಯೇಕ ಊಟದ ಕೌಂಟರ್ ಮಾಡಬೇಕು. ಹಿರಿಯ ಅಧಿಕಾರಿಗಳಿಗೆ ಲೈಸನ್ ಅಧಿಕಾರಿಗಳನ್ನು ನೇಮಕ ಮಾಡಿ ಈಗಾಗಲೇ ಆದೇಶ ಹೊರಡಿಸಲಾಗಿದ್ದು, ಅವರು ನಿರಂತರವಾಗಿ ಸಮನ್ವಯ ಸಾಧಿಸಬೇಕು ಎಂದರು. ಜಿಪಂ ಸಿಇಒ ರಾಹುಲ್ ಶಿಂಧೆ ಮಾತನಾಡಿದರು. ಪೊಲೀಸ್ ಆಯುಕ್ತ ಭೂಷಣ ಬೋರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಪ್ರೊಬೇಷನರಿ ಐಎಎಸ್ ಅಧಿಕಾರಿ ಅಭಿನವ್ ಜೈನ್, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ ಹಾಗೂ ವಿವಿಧ ಉಪ ಸಮಿತಿಗಳ ಮುಖ್ಯಸ್ಥರು, ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net