ಫೌಂಡ್ರಿ ಕ್ಲಸ್ಟರ್‌ಗೆ ದಾರಿ ಸಂಕಷ್ಟ

ಬೆಳಗಾವಿಯ ಫೌಂಡ್ರಿ ಕ್ಲಸ್ಟರ್ ಪ್ರಮುಖ ರಸ್ತೆ ಸಂಪೂರ್ಣ ಹಾಳಾಗಿರುವುದು.
ಬೆಳಗಾವಿಯ ಫೌಂಡ್ರಿ ಕ್ಲಸ್ಟರ್ ಪ್ರಮುಖ ರಸ್ತೆ ಸಂಪೂರ್ಣ ಹಾಳಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಹಾಳಾಗಿ ಎರಡು ವರ್ಷವಾದರೂ ಆಗದ ಸುಧಾರಣೆ
  • ರಸ್ತೆಗಿಲ್ಲ ಅಭಿವೃದ್ಧಿ ಭಾಗ್ಯ
ಬೆಳಗಾವಿ: ಇಲ್ಲಿನ ಫೌಂಡ್ರಿ ಕ್ಷೇತ್ರ ದೇಶದಲ್ಲೇ ಟಾಪ್ 10ರಲ್ಲಿ ಸ್ಥಾನ ಪಡೆದಿದೆ. ಬೆಳಗಾವಿಯಿಂದ ರಾಜ್ಯ ಸರ್ಕಾರಕ್ಕೆ ಅತಿ ಹೆಚ್ಚಿನ ತೆರಿಗೆ ಇದೇ ವಲಯದಿಂದ ಸಂದಾಯವಾಗುತ್ತದೆ. ಇಂಗ್ಲೆಂಡ್, ಫ್ರಾನ್ಸ್ ಸೇರಿ 10ಕ್ಕೂ ಹೆಚ್ಚು ವಿದೇಶಗಳಿಗೆ ವಿವಿಧ ಯಂತ್ರೋಪಕರಣಗಳ ಬಿಡಿಭಾಗಗಳನ್ನು ರಫ್ತು ಮಾಡುತ್ತದೆ. ಇಂತಹ ವಲಯಕ್ಕೆ ಹೋಗುವ ಪ್ರಮುಖ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ.
ಖಾನಾಪುರ ರಸ್ತೆಯಿಂದ ಫೌಂಡ್ರಿ ಕ್ಲಸ್ಟರ್ ಸಂಪರ್ಕಿಸಲು ದ್ವಿಪಥದ ರಸ್ತೆ ಮಾಡಲಾಗಿದ್ದು, ಸಂಪೂರ್ಣ ಹಾಳಾಗಿದೆ. ಖಾನಾಪುರ ರಸ್ತೆಯಿಂದ ಈ ವಲಯದ ಪ್ರಮುಖ ರಸ್ತೆಯನ್ನು ಸೇರುವಾಗ ಆಕರ್ಷಣೀಯವಾಗಿ ಕೆಲ ಯಂತ್ರೋಪಕರಣಗಳ ಬಿಡಿಭಾಗಗಳ ಮಾದರಿಗಳಿಂದಲೇ ಸ್ವಾಗತ ವೃತ್ತ ಮಾಡಲಾಗಿದೆ. ಈ ವೃತ್ತವನ್ನು ನೋಡಿ ರಸ್ತೆಗಿಳಿದರೇ ಆಯತಪ್ಪಿ ಬೀಳುವುದು ಖಚಿತ. ಏಕೆಂದರೆ ಆರಂಭದಿಂದಲೇ ದೊಡ್ಡ ದೊಡ್ಡ ಗುಂಡಿಗಳು ಎದುರಾಗುತ್ತವೆ.
ಗುಂಡಿಗಳಲ್ಲಿ ಮಳೆ ಬಂದಾಗ ಕೆಸರು ನೀರು ತುಂಬಿಕೊಂಡರೆ, ಬೇಸಿಗೆಯಲ್ಲಿ ಧೂಳು ಆವರಿಸಿಕೊಳ್ಳುತ್ತಿದೆ. ನೂರಕ್ಕೂ ಹೆಚ್ಚು ಫೌಂಡ್ರಿಗಳಿಗೆ ಇದೇ ಪ್ರಮುಖ ಮಾರ್ಗ. ಹೀಗಾಗಿ ಇಲ್ಲಿಗೆ ಬಂದು ಹೋಗುವ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ.
ಈ ರಸ್ತೆ ಕೈಗಾರಿಕೆಗಳಲ್ಲದೆ ಶಾಲೆ, ಕಾಲೇಜುಗಳಿವೆ. ಚನ್ನಮ್ಮ ನಗರ ಜನವಸತಿ ಪ್ರದೇಶಕ್ಕೂ ಇದೇ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಆದರೂ ರಸ್ತೆ ಅಭಿವೃದ್ಧಿ ಬಗ್ಗೆ ಸಂಬಂಧಿಸಿದವರು ಗಮನ ಹರಿಸಿಲ್ಲ.
ಈ ಬಗ್ಗೆ ಸ್ಥಳೀಯರು ಶಾಸಕರು, ಸಚಿವರಿಗೂ ಮನವಿ ಮಾಡಿದ್ದಾರೆ. ಅನುದಾನ ಬರಲಿದೆ. ಶೀಘ್ರ ಕಾಮಗಾರಿ ಆರಂಭವಾಗುತ್ತದೆ ಎಂಬ ಭರವಸೆ ನೀಡುತ್ತಿದ್ದಾರೆ, ಹೊರತು ಕಾಮಗಾರಿ ಆರಂಭಗೊಂಡಿಲ್ಲ. ಕನಿಷ್ಠ ಇಲ್ಲಿನ ಗುಂಡಿಗಳನ್ನು ಮುಚ್ಚುವ ತುರ್ತು ಕೆಲಸವೂ ಆಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಈ ಭಾಗದಲ್ಲಿ ಸಾಕಷ್ಟು ಕೈಗಾರಿಕಾ ಘಟಕಗಳಿವೆ. ನಮ್ಮ ಕಾರ್ಖಾನೆಗೆ ಬರುವ ಕಾರ್ಮಿಕರೂ ತೊಂದರೆ ಅನುಭವಿಸುತ್ತಿದ್ದಾರೆ. ನಮ್ಮ ಸಂಘದಿಂದ ಸಾಕಷ್ಟು ಸಲ ಮನವಿ ಕೊಟ್ಟಿದ್ದರೂ ರಸ್ತೆ ಅಭಿವೃದ್ಧಿಯಾಗುತ್ತಿಲ್ಲ.ಸದಾನಂದ ಹುಂಬರವಾಡಿ ಕಾರ್ಯದರ್ಶಿ, ಫೌಂಡ್ರಿ ಕ್ಲಸ್ಟರ್ ಅಸೋಸಿಯೇಷನ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net