ಗುರ್ಲಾಪುರ: ರೈತ ಯಾವುದೇ ಕಾರಣಕ್ಕೂ ಬೀದಿಯಲ್ಲಿ ಕುಳಿತುಕೊಳ್ಳಬಾರದು. ಅವರಿಗಾಗಿ ನಾನು ಯಾವುದೆ ಕೆಲಸ ಮಾಡಲು ಸಿದ್ದನಿದ್ದೇನೆ. ಪ್ರತಿ ಟನ್ ಕಬ್ಬಿಗೆ 3,100 ರೂ. 3,150 ರೂ. ಮತ್ತು 3,200 ರೂ. ಹಂತ ಹಂತವಾಗಿ ನೀಡಲು ಕಾರ್ಖಾನೆ ಮಾಲೀಕರ ಮನವೊಲಿಸಿದ್ದೇನೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು. ಗ್ರಾಮದಲ್ಲಿ ಭಾನುವಾರ ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಇದಕ್ಕೆ ಪಟ್ಟುಬಿಡದ ರೈತ ಹೋರಾಟಗಾರರು, 3,500 ರೂ. ದರ ನೀಡಬೇಕು ಎಂದು ಆಗ್ರಹಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡಿ, ಕಾರ್ಖಾನೆ ಮಾಲೀಕರು ಹಾಗೂ ಸರ್ಕಾರದ ಮೇಲೆ ನಮಗೆ ವಿಶ್ವಾಸವಿಲ್ಲ. ಒಂದು ದಿನದ ಗಡುವು ನೀಡುತ್ತೇವೆ, ಇತ್ಯರ್ಥಕ್ಕೆ ಬರಬೇಕು ಇಲ್ಲವೇ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಕರ್ನಾಟಕದ ಪ್ರತಿಯೊಂದು ತಾಲೂಕುಗಳಲ್ಲಿ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು. ರೈತ ಮುಖಂಡ ಶಶಿಕಾಂತ ಗುರೂಜಿ, ಶಾಸಕರಾದ ಮಹೇಂದ್ರ ತಮ್ಮಣ್ಣವರ, ದುರ್ಯೋಧನ ಐಹೊಳೆ, ಮಹಾರಾಷ್ಟ್ರದ ರಾಜು ಶೆಟ್ಟಿ, ವಿವಿಧ ಸ್ವಾಮೀಜಿಗಳು, ಸಾರ್ವಜನಿಕರು ಪ್ರತಿಭಟನೆಗೆ ಬೆಂಬಲ ಸೂಚಿಸಿ ನೆರವು ನೀಡಿದರು.