ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ಕೃಷ್ಣಾ ನದಿ ಪಕ್ಕದಲ್ಲಿರುವ ಕಲ್ಲಪ್ಪ ಜಾಮಗೊಂಡ ಅವರ ಗದ್ದೆಯಲ್ಲಿ 5 ಅಡಿ ಮೊಸಳೆಯನ್ನು ಗ್ರಾಮಸ್ಥರು ಸೆರೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬುಧವಾರ ಹಸ್ತಾಂತರಿಸಿದರು.
ಗದ್ದೆಯಲ್ಲಿ ಮೊಸಳೆ ಕಂಡ ಕೂಲಿ ಕಾರ್ಮಿಕರು ಕೆಲ ಹೊತ್ತು ಗಾಬರಿಗೊಂಡರು. ಬಳಿಕ ಹಗ್ಗದಿಂದ ಕಟ್ಟಿ ಸೆರೆ ಹಿಡಿದು ಅಥಣಿ ಉಪವಲಯ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಅಥಣಿ ಉಪವಲಯ ಅರಣ್ಯ ಇಲಾಖೆ ಅಧಿಕಾರಿ ಶ್ರವಣಕುಮಾರ ಮಡ್ಡಿ ಹಾಗೂ ಸಿಬ್ಬಂದಿ ಮೊಸಳೆ ವಶಕ್ಕೆ ಪಡೆದು ಹಿಡಕಲ್ ಜಲಾಶಯದಲ್ಲಿ ಬಿಡುವುದಾಗಿ ತಿಳಿಸಿದರು. ಸಿಬ್ಬಂದಿಗಳಾದ ಶಾಮ ಕಾಂಬಳೆ, ದತ್ತಾ ಜಾಧವ, ಮುರಗೇಶ ಠಕ್ಕಣ್ಣವರ, ಪ್ರವೀಣ ಸೇರಿದಂತೆ ಗ್ರಾಮಸ್ಥರು ಇದ್ದರು.