ಸಮುದಾಯದ ಧ್ರುವತಾರೆ ಡಾ.ಶಾಮನೂರು ಶಿವಶಂಕರಪ್ಪ

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹಾಗೂ ಮುತ್ಸದ್ದಿ ರಾಜಕಾರಣಿ ದಿ.ಡಾ.ಶಾಮನೂರು ಶಿವಶಂಕರಪ್ಪ.
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹಾಗೂ ಮುತ್ಸದ್ದಿ ರಾಜಕಾರಣಿ ದಿ.ಡಾ.ಶಾಮನೂರು ಶಿವಶಂಕರಪ್ಪ.
Published on
ಬೆಳಗಾವಿ: ದಾವಣಗೆರೆಯನ್ನು ವಿಶ್ವದ ಭೂಪಟದ ಮೇಲೆ ಗುರುತಿಸುವಂತೆ ಮಾಡಿದ ಮುತ್ಸದ್ದಿ ರಾಜಕಾರಣಿ ಡಾ.ಶಾಮನೂರು ಶಿವಶಂಕರಪ್ಪನವರು ನಿಜಕ್ಕೂ ಅಜಾತಶತ್ರುವಾಗಿದ್ದರು. ಅವರದು ಮಾಗಿದ ವ್ಯಕ್ತಿತ್ವ. ಕೇವಲ ಸಂಪತ್ತಿನಲ್ಲಿ ಶ್ರೀಮಂತರಲ್ಲ. ಅವರ ಹೃದಯ ಶ್ರೀಮಂತಿಕೆ ದೊಡ್ಡದಾಗಿತ್ತು.
ದುಡಿಮೆ-ದಾಸೋಹ, ಜಾತ್ಯತೀತ ಗುಣ ಮೈಗೂಡಿಸಿಕೊಂಡು ಶೋಷಿತ ಸಮುದಾಯಗಳ ಸೇವೆ ಮಾಡುತ್ತ ಬಂದರು. ಯಾವುದೇ ಸಮುದಾಯ ನಿರ್ಲಕ್ಷಿಸಿಲ್ಲ. ಬೇಡಿ ಬಂದವರಿಗೆ ಕೊಟ್ಟು ದಣಿಯಲಿಲ್ಲ. ದಾನಮಾಡಿ ಖುಷಿ ಪಟ್ಟರು. ಕರ್ನಾಟಕದ ಉದ್ದಗಲಕ್ಕೂ ಉದಾರವಾದ ಸಾಮಾಜಿಕ, ಧಾರ್ಮಿಕ ಕೊಡುಗೆ ನೀಡಿ ಸಂಪತ್ತನ್ನು ಸಮಾಜಕ್ಕೆ ನೀಡಿ ಕೃತಾರ್ಥರಾದರು.
ಸಮಾಜದಿಂದ ಗಳಿಸಿದ ಅಪಾರ ಸಂಪತ್ತನ್ನು ಸಮಾಜದ ಯೋಗಕ್ಷೇಮಕ್ಕಾಗಿ ವ್ಯಯಿಸಿರುಚ ಡಾ.ಶಾಮನೂರು ಶಿವಶಂಕರಪ್ಪನವರು ನಮ್ಮ ಕಾಲಮಾನದ ಅರಟಾಳ ರುದ್ರಗೌಡರೇ ಆಗಿದ್ದಾರೆ. ಶಾಮನೂರು ಅವರದು ಸಮಗ್ರತೆಯ ವ್ಯಕ್ತಿತ್ವವಾಗಿತ್ತು. ಯುವಕರು ನಾಚುವಂತೆ ಕೆಲಸ ಮಾಡಿದರು. ನಿಜ ಅರ್ಥದಲ್ಲಿ ಅವರು ಕಾಯಕಯೋಗಿಗಳು. ಅಣ್ಣ ಬಸವಣ್ಣನವರ ಕಾಯಕ ತತ್ತ್ವ ಅನುಷ್ಠಾನಕ್ಕೆ ತಂದಿರುವ ಅವರು ಪರೋಪಕಾರದಲ್ಲಿಯೇ ಜೀವನದ ಸಾರ್ಥಕ್ಯ ಕಂಡುಕೊಂಡರು.
ಕೋಟಿಗೊಬ್ಬ ಶರಣ ಎಂಬ ಮಾತಿನಂತೆ ಹೇಳಿದ್ದನ್ನೇ ಮಾಡುವ, ಮಾಡುವುದನ್ನೇ ಹೇಳುವ ವ್ಯಕ್ತಿತ್ವ ಅವರದಾಗಿತ್ತು. ಅವರ ನಡೆ ನುಡಿ ಒಂದೇ ಇರುವುದರಿಂದಲೇ ಸಮಾಜದಲ್ಲಿ ಅವರಿಗೆ ಇಂದಿಗೂ ಅದೇ ಗೌರವ, ಘನತೆಯುಕ್ತ ಸ್ಥಾನವಿರುವುದನ್ನು ಅವಲೋಕಿಸಬಹುದು. ಅವರೆಂದೂ ಅಧಿಕಾರದ ದರ್ಪದಿಂದ ವರ್ತಿಸಿದವರಲ್ಲ. ತಮ್ಮ ಕ್ಷೇತ್ರದ ಜನತೆಗೆ ನಡೆದಾಡುವ ದೇವರಾಗಿ ಕಂಡವರು. ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷರಾಗಿ ಸರ್ವೋನ್ನತ ಸೇವೆ ನೀಡಿದರು.
ಮಹಾಸಭೆ ಸಾಕಷ್ಟು ವಿಸ್ತರಿಸಿ, ಬೆಳೆಸಿದ್ದಾರೆ. ಅವರ ಕಾಲದಲ್ಲಿಯೇ ಅತಿ ಹೆಚ್ಚು ಸದಸ್ಯರು ನೋಂದಣಿಯಾಗಿದ್ದು ದಾಖಲೆ. ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲಿ ವೀರಶೈವ ಸಭಾಭವನ ನಿರ್ಮಿಸುವ ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ಸಮಾಜ ಸಂಘಟನೆಗೆ ಶಿವಶಂಕರಪ್ಪನವರು ಇಂಬು ನೀಡಿದರು. ಪ್ರತಿ ಜಿಲ್ಲೆಗೆ ಮಹಾಸಭೆಯ ಸ್ವಂತ ಕಟ್ಟಡ ನಿರ್ಮಾಣಕ್ಕೆ ಪ್ರೋತ್ಸಾಹಿಸಿ ವಿಶ್ವಾಸ ತುಂಬಿದರು. ಬೆಳಗಾವಿಯಲ್ಲಿ ನಿರ್ಮಾಣಗೊಂಡಿರುವ ವಿದ್ಯಾರ್ಥಿನಿಯರ ಉಚಿತ ವಸತಿನಿಲಯ ಸ್ಥಾಪನೆಗೂ ಅವರ ಮಾರ್ಗದರ್ಶನ ಪ್ರೇರಣೆ, ದಾನ ಮರೆಯುವಂತಿಲ್ಲ.
ಕಳೆದ ಆರು ದಶಕಗಳಿಂದ ರಾಜಕಾರಣದಲ್ಲಿ ಸಕ್ರಿಯರಾಗಿರುವ ಶಿವಶಂಕರಪ್ಪನವರು ರಾಜ್ಯ ಸಚಿವರಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ. ಯಾವುದೇ ಪಕ್ಷಾಂತರವಿಲ್ಲದೆ ಸೈದ್ಧಾಂತಿಕ ವಿಚಾರಗಳಿಗೆ ಬದ್ಧರಾಗಿ ಬದುಕಿದ್ದಾರೆ. ಯಾವುದೇ ರಾಜಿ ಮಾಡಿಕೊಳ್ಳದೆ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ದಾವಣಗೆರೆಯಲ್ಲಿ ಬಾಪೂಜಿ ಶಿಕ್ಷಣ ಸಂಸ್ಥೆ ಮೂಲಕ ಗ್ರಾಮೀಣ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯಕ್ಕೆ ಡಾ.ಶಾಮನೂರು ಶಿವಶಂಕರಪ್ಪನವರು ಒಂದು ದೊಡ್ಡ ಆಸ್ತಿ. ಪ್ರತ್ಯೇಕ ಧರ್ಮ ಹೋರಾಟದ ವೇಳೆ ವಿಭಜನೆ ವಿರೋಧಿಸಿ ಗಟ್ಟಿಯಾಗಿ ನಿಂತರು. ಪಕ್ಷ ಎದುರು ಹಾಕಿಕೊಂಡು ವೀರಶೈವ ಲಿಂಗಾಯತ ಸಮುದಾಯದ ಏಕತೆಗೆ ಹೋರಾಡಿದರು. ಬಹುಮುಖ್ಯವಾಗಿ ಲಿಂಗಾಯತ ಸಮುದಾಯವನ್ನು ಇಬ್ಭಾಗವಾಗುವುದರಿಂದ ರಕ್ಷಿಸಿದ್ದಾರೆ. ರಾಜಕೀಯ ರಂಗದಲ್ಲೂ ಸಮುದಾಯ ಒಡೆಯದಂತೆ, ಸಮುದಾಯದ ಮತಗಳು ಹಂಚಿ ಹೋಗದಂತೆ ನೋಡಿಕೊಂಡವರು.
ಬದುಕಿನುದ್ದಕ್ಕೂ ಸಮಾಜಮುಖಿ ಚಿಂತನೆ ಮಾಡಿದರು. ನನ್ನ ಹಿರಿಯಣ್ಣನಾಗಿ ಮಾರ್ಗದರ್ಶನ ನೀಡಿದವರು. ಕೆಎಲ್‌ಇ ಸಂಸ್ಥೆಯ ಬೆಳವಣಿಗೆ ಕಂಡು ಹರ್ಷ ವ್ಯಕ್ತಪಡಿಸಿದವರು. ಅಂತಹ ಹಿರಿಯಣ್ಣನನ್ನು ಕಳೆದುಕೊಂಡ ನೋವು ಬಾಧಿಸುತ್ತಿದೆ. ಸಮಾಜಮುಖಿ, ದಾನಶೂರನಿಗೆ ಎಂದಿಗೂ ಸಾವಿಲ್ಲ. ಶರಣರನ್ನು ಮರಣದಲ್ಲಿ ಕಾಣು ಎಂಬುವುದು ನಮ್ಮ ಶರಣಸಂಸ್ಕೃತಿಯ ತಿರುಳು. ಶಾಮನೂರು ಶಿವಶಂಕರಪ್ಪನವರ ಚೇತನ ಚಿರಂಜೀವಿ.
  • ಲೇಖನ: ಡಾ.ಪ್ರಭಾಕರ ಕೋರೆ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷರು, ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಉಪಾಧ್ಯಕ್ಷರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net