ಪಾಲಿಕೆ ನಿರ್ಲಕ್ಷೃಕ್ಕೆ ಉದ್ಯಮಿಗಳು ಆಕ್ರೋಶ

ಬೆಳಗಾವಿ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆ ಜರುಗಿತು. ಮಂಗೇಶ ಪವಾರ್, ವಾಣಿ ಜೋಶಿ, ಕಾರ್ತಿಕ್.ಎಂ. ಇತರರಿದ್ದರು.
ಬೆಳಗಾವಿ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆ ಜರುಗಿತು. ಮಂಗೇಶ ಪವಾರ್, ವಾಣಿ ಜೋಶಿ, ಕಾರ್ತಿಕ್.ಎಂ. ಇತರರಿದ್ದರು.
Published on
ಬೆಳಗಾವಿ :ಸಾವಿರಾರೂ ಯುವಕರಿಗೆ ಉದ್ಯೋಗ ನೀಡಿದ್ದೇವೆ. ಸರ್ಕಾರ, ಮಹಾನಗರ ಪಾಲಿಕೆಗೆ ವಾರ್ಷಿಕ ಕೋಟ್ಯಂತರ ರೂ. ತೆರಿಗೆ ಕಟ್ಟುತ್ತಿದ್ದರೂ ಕುಡಿಯುವ ನೀರು, ರಸ್ತೆ, ಬೀದಿ ದೀಪಕ್ಕಾಗಿ ನಾವು ಅಂಗಲಾಚಬೇಕು. ನಿಮ್ಮ ನಿರ್ಲಕ್ಷೃದಿಂದಾಗಿ ನಗರದಲ್ಲಿ ವಿದೇಶಿ ಕಂಪನಿಗಳು ಬಂಡವಾಳ ಹೂಡಿಕೆಗೆ ಹಿಂಜರಿಯುತ್ತಿವೆ. ಕೈಗಾರಿಕೆ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಅನುದಾನ ಕೊರತೆ ನೆಪ ಹೇಳುವುದು ಎಷ್ಟು ಸರಿ?
ಇದು ಮಹಾನಗರ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾಜಿ ಮೇಯರ್, ಉದ್ಯಮಿಗಳು, ಹೋರಾಟಗಾರರು, ಸಾರ್ವಜನಿಕರು ಪಾಲಿಕೆ ಆಡಳಿತ, ಅಧಿಕಾರಿ ವರ್ಗದ ನಿರ್ಲಕ್ಷೃಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪರಿ.
ಬೆಳಗಾವಿ ಉದ್ಯಮಭಾಗದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿ ಇಲ್ಲ. ಬೀದಿ ದೀಪದ ಸೌಲಭ್ಯ ಇಲ್ಲವೇ ಇಲ್ಲ. ಕುಡಿಯುವ ನೀರಿನ ಪೈಪಲೈನ್‌ವೇ ಇಲ್ಲ. ಆದರೂ, ನೀರಿನ ತೆರಿಗೆ ಕಟ್ಟುತ್ತಿದ್ದೇವೆ. ಮಳೆಗಾಲ ಆರಂಭವಾದರೆ ಚರಂಡಿ ನೀರು ರಸ್ತೆಯ ಮೇಲೆ ಹರಿದು ಓಡಾಡಲು ಬಾರದಂತೆ ಸ್ಥಿತಿ ನಿರ್ಮಾಣವಾಗುತ್ತದೆ. ರಸ್ತೆಯ ಎರಡು ಬದಿಯಲ್ಲಿ ಕಸದ ರಾಶಿ ಬಿದ್ದಿವೆ. ಇಂತಹ ಪರಿಸ್ಥಿತಿ ಕಂಡು ದೇಶ, ವಿದೇಶಿ ಕಂಪನಿಗಳು ಹೂಡಿಕೆಗೆ ಹಿಂದೇಟು ಹಾಕುತ್ತಿವೆ. ಸಮಸ್ಯೆ ಪರಿಹರಿಸುವಂತೆ ಪದೇ ಪದೇ ಮನವಿ ಸಲ್ಲಿಸಿದರು ಪ್ರಯೋಜನವಾಗುತ್ತಿಲ್ಲ ಉದ್ಯಮಿಗಳು ದೂರಿದರು.
ಮಾಜಿ ಮೇಯರ್ ವಿಜಯ ಮೋರೆ ಮಾತನಾಡಿ, ಮಹಾನಗರ ಪಾಲಿಕೆಗೆ ವಾರ್ಷಿಕ ಕೋಟ್ಯಂತ ರೂ. ತೆರಿಗೆ ಸಂಗ್ರಹ ಆಗುತ್ತಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಆಗುತ್ತಿಲ್ಲ. ಇ-ಶೌಚಗೃಹಗಳು ಬಂದ್ ಆಗಿ ವರ್ಷ ಕಳೆದರು ದುರಸ್ತಿ ಇಲ್ಲ. ನೂರಾರು ಕೋಟಿ ರೂ. ಮೌಲ್ಯದ ಪಾಲಿಕೆ ಆಸ್ತಿಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಅಲ್ಲಿ ದೊಡ್ಡ ಮಾಲ್‌ಗಳನ್ನು ನಿರ್ಮಿಸಿ ಪಾಲಿಕೆಗೆ ನಿರ್ಧಿಷ್ಟ ಆದಾಯ ಸೃಷ್ಟಿಸುವ ಕೆಲಸ ಆಗುತ್ತಿಲ್ಲ. ಯಾವುದೇ ಕಟ್ಟಡಕ್ಕೆ ಮಳೆ ನೀರು ಕೊಯ್ಲು ಅಳವಡಿಕೆ ಇಲ್ಲ. ಬೇಕಾಬಿಟ್ಟಿ ಕಟ್ಟಡ ಪರವಾನಗಿ ನೀಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು. ರುದ್ರಭೂಮಿ ಅಭಿವೃದ್ಧಿ ಎಂಬುದು ಪಾಲಿಕೆ ಆಡಳಿತ ಮರೆತು ಬಿಟ್ಟಿದೆ ಎಂದು ದೂರಿದರು.
ಉಪಮೇಯರ್ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ ಹಣಮಂತ ಕೊಂಗಾಲಿ, ಆಯುಕ್ತ ಕಾರ್ತಿಕ್.ಎಂ., ಸ್ಥಾಯಿ ಸಮಿತಿ ಅಧ್ಯಕ್ಷೆ ನೇತ್ರಾವತಿ ಭಾಗವತ, ವಿರೋಧ ಪಕ್ಷದ ನಾಯಕ ಮೊಹಮ್ಮದ ಸಂಗೋಳ್ಳಿ ಇತರರಿದ್ದರು.
..................
ಬಾಕ್ಸ್
ಪಾಲಿಕೆ ಕಾಂಪ್ಲೆಕ್ಸ್ ಸದ್ಬಳಕೆ ಮಾಡಿಕೊಳ್ಳಿ
ಮಹಾನಗರದ ವಿವಿಧ ಭಾಗಗಳಲ್ಲಿ ಪಾಲಿಕೆ ವತಿಯಿಂದ ಕಾಂಪ್ಲೆಕ್ಸ್ ನಿರ್ಮಿಸಲಾಗಿದೆ. ಆದರೆ, ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಕೆಲ ಭಾಗದಲ್ಲಿ ಗುತ್ತಿಗೆ ಅವಧಿ ಮುಗಿದಿರುವ ನವೀಕರಣ ಇಲ್ಲ. ಕಟ್ಟಡಗಳು ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ. ಇಂತಹ ಸಂದರ್ಭದಲ್ಲಿ ಆದಾಯ ಸೃಷ್ಟಿಗೆ ಹೊಸ ಕಟ್ಟಡ ಕಟ್ಟುವ ಬದಲು ಹಳೆ ಕಟ್ಟಡ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಯೋಜನೆ ಹಾಕಿಕೊಳ್ಳಿ. ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಚರಂಡಿ, ಬೀದಿ ದೀಪ ಅಳವಡಿಸುವುದು ಅಲ್ಲ ಎಂದು ನಾಗರಿಕರು ದೂರಿದರು.
......................
ಬಾಕ್ಸ್
ಬಡ ಪತ್ರಕರ್ತರ ಮಕ್ಕಳ ಶಿಕ್ಷಣಕ್ಕೆ ಅನುದಾನ ಮೀಸಲಿಡಿ
ಮಹಾನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಲ್ಲಿ ಬಹುತೇಕರು ಬಡವರಿದ್ದು, ಆರ್ಥಿಕ ಸಮಸ್ಯೆದಿಂದಾಗಿ ಮಕ್ಕಳಿಗೆ ಉನ್ನತ ಶಿಕ್ಷಣ ಓದಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅರ್ಹ ಬಡ ಪತ್ರಕರ್ತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಬಜೆಟ್‌ನಲ್ಲಿ ಕನಿಷ್ಠ 15 ರಿಂದ 20 ಲಕ್ಷ ರೂ. ಅನುದಾನ ಮೀಸಲಿಡಬೇಕು. ಜತೆಗೆ ಆರೋಗ್ಯ ಸೌಲಭ್ಯಕ್ಕೆ ಮೀಸಲಿಟ್ಟಿರುವ ಅನುದಾನ 1 ಕೋಟಿ ರೂ. ವರೆಗೆ ಹೆಚ್ಚಿಸಬೇಕು ಎಂದು ಪತ್ರಕರ್ತರ ಮೆಹಬೂಬ ಮಕಾಂದದಾರ್ ಸೇರಿ ಇತರರು ವಿನಂತಿಸಿದರು.
.....................
ಬಾಕ್ಸ್
ನಿಮ್ಮ ಕಸಕ್ಕೆ ನಿವೇ ಜವಾಬ್ದಾರರು
ಬಜೆಟ್ ಪೂರ್ವಭಾವಿ ಸಭೆಯಲ್ಲಿ ಉದ್ಯಮಿಗಳು, ಹೋರಾಟಗಾರರು, ನಾಗರಿಕರು ನೀಡಿರುವ ಸಲಹೆಗಳನ್ನು ಸ್ವೀಕರಿಸಿ ಬಜೆಟ್‌ನಲ್ಲಿ ಉಲ್ಲೇಖಿಸಲಾಗುವುದು. ಉದ್ಯಮಭಾಗಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವ ಕುರಿತು ಕೂಡಲೇ ಸಂಬಂಧಪಟ್ಟ ಅಧಿಕಾರಿ ಸಭೆ ನಡೆಸಿ ಕ್ರಮ ವಹಿಸಲಾಗುವುದು. ನಗರದಲ್ಲಿ ಸ್ವಚ್ಛತೆಗೆ ಪಾಲಿಕೆ ಸಿಬ್ಬಂದಿ ಜತೆಗೆ ಸಾರ್ವಜನಿಕರು ಕೈ ಜೋಡಿಸಬೇಕು. ನಿಮ್ಮ ಕಸಕ್ಕೆ ನಿವೇ ಜವಾಬ್ದಾರಿಯಾಗಿದ್ದು, ಮನೆ ಬಾಗಿಲಿಗೆ ಬರುವ ವಾಹನಕ್ಕೆ ಕಸ ಹಾಕಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದರ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಮಂಗೇಶ ಪವಾರ್ ಎಚ್ಚರಿಕೆ ನೀಡಿದರು.
...........
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net