ಬೆರಗುಗೊಳಿಸುವ ಅಂಧ ಸುಮಿತ್ ಸಾಧನೆ

ಸುಮಿತ್ ಮೊಟೆಕರ
ಸುಮಿತ್ ಮೊಟೆಕರ
Published on
ಬೆಳಗಾವಿ: ಗೆಜೆಟೆಡ್ ಪ್ರೊಬೇಷನರಿ ಹುದ್ದೆ ನೇಮಕಾತಿ ನಡೆದ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಬೆಳಗಾವಿ ಮಹಾನಗರ ಪಾಲಿಕೆಯ ಎಸ್‌ಡಿಎ ಸುಮಿತ್ ಮೊಟೆಕರ 8ನೇ ರ‌್ಯಾಂಕ್ ಪಡೆಯುವ ಮೂಲಕ ಸಾಧನೆ ಗೈದಿದ್ದಾರೆ.
ಕಣ್ಣು,ಕೈಕಾಲು ಸರಿ ಇರುವ ಯಾವುದೇ ವ್ಯಕ್ತಿಯ ಸಾಧನೆಗಳಲ್ಲ.ಹುಟ್ಟು ಕುರುಡನಾದ ಸುಮಿತ್ ಮೊಟೆಕರ ಎಂಬ 28ರ ಹರೆಯದ ಉತ್ಸಾಹಿ ಯುವಕನ ಸಾಧನೆ. ಸರ್ಕಾರಿ ಕೆಲಸದ ಜತೆಗೆ ಯಾವುದೇ ತರಬೇತಿ ಪಡೆದುಕೊಳ್ಳದೆ ನಿತ್ಯ 6 ರಿಂದ 8 ಗಂಟೆ ಅಧ್ಯಯನ ಮಾಡುವ ಮೂಲಕ ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. 2024ರಲ್ಲಿ ಕೆಎಎಸ್ ಪರೀಕ್ಷೆ ಬರೆದಿದ್ದು, 2025ರಲ್ಲಿ ಮುಖ್ಯ ಪರೀಕ್ಷೆ ಎದುರಿಸಿ ಪಾಸಾಗಿದ್ದರು. 2026 ಮಾ.28ರಂದು ಸಂದರ್ಶನ ಎದುರಿಸಲು ಸಜ್ಜಾಗಿದ್ದಾರೆ.
ಮೂಲತಃ ಗೋಕಾಕ ನಗರದ ನಿವಾಸಿಯಾಗಿರುವ ಸುಮಿತ್ ಮೊಟೆಕರ ಅವರ ತಾಯಿ ಶೋಭಾ ಮೊಟಕರ ಗೋಕಾಕ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಬ್ಬರು ಸಹೋದರರಿಯಲ್ಲಿ ಒಬ್ಬರು ವಿವಾಹ ಮಾಡಿಕೊಂಡಿದ್ದಾರೆ.ಇನ್ನೋಬ್ಬರು ಹುಟ್ಟು ಕುರುಡರಾಗಿರುವ ಸೌಕನ್ಯ ಮೊಟೆಕರ ಅವರು ಬೆಂಗಳೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಫ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದೃಷ್ಟಿಹೀನತೆ ಇದ್ದರೂ ದೃಢ ಸಂಕಲ್ಪ ಮತ್ತು ನಿರಂತರ ಪರಿಶ್ರಮದಿಂದ ದೊಡ್ಡ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಗಾವಿಯ ಸುಮಿತ್ ಮೊಟೆಕರ ಉದಾಹರಣೆಯಾಗಿದ್ದಾರೆ. ಕಣ್ಣು ಕಾಣದಿದ್ದರೂ ಕನಸುಗಳಿಗೆ ಯಾವುದೇ ಅಡ್ಡಿ ಇಲ್ಲ ಎಂಬುದನ್ನು ಸುಮಿತ್ ಮೊಟೆಕರ ತಮ್ಮ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾರೆ. ಅವರ ಈ ಸಾಧನೆ ವಿಶೇಷವಾಗಿ ಅಂಗವೈಕಲ್ಯ ಹೊಂದಿದವರಿಗೆ ಹೊಸ ಆತ್ಮವಿಶ್ವಾಸ ನೀಡುವಂತಿದೆ. ದೈಹಿಕ ಅಡಚಣೆಗಳು ಇದ್ದರೂ ಮನಸ್ಸಿನ ಬಲ ಮತ್ತು ಗುರಿಯತ್ತಿನ ನಿಷ್ಠೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬ ಸಂದೇಶವನ್ನು ಅವರು ಸಮಾಜಕ್ಕೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net