ಅಪಾರ್ಟಮೆಂಟ್ ಮನೆಗಳ ಬುಕ್ಕಿಂಗ್!

ಸುವರ್ಣ ವಿಧಾನ ಸೌಧದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಎಸ್ಪಿ ಭೀಮಾಶಂಕರ ಗುಳೇದ ಇತರರು ಚಳಿಗಾಲ ಅಧಿವೇಶನ ಸಿದ್ಧತೆ ಪರಿಶೀಲಿಸಿದರು.
ಸುವರ್ಣ ವಿಧಾನ ಸೌಧದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಎಸ್ಪಿ ಭೀಮಾಶಂಕರ ಗುಳೇದ ಇತರರು ಚಳಿಗಾಲ ಅಧಿವೇಶನ ಸಿದ್ಧತೆ ಪರಿಶೀಲಿಸಿದರು.
Published on
ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಈ ಬಾರಿ ವಿಧಾನ ಮಂಡಲ ಚಳಿಗಾಲ ಅಧಿವೇಶನ ಆರಂಭಗೊಳ್ಳುವ ಮುನ್ನವೇ ನಗರದಲ್ಲಿ ಹೋಟೆಲ್, ಲಾಡ್ಜ್‌ಗಳಲ್ಲಿನ ರೂಂ, ಅಪಾರ್ಟಮೆಂಟ್‌ಗಳಲ್ಲಿನ ಮನೆಗಳಿಗೆ ಡಿಮಾಂಡ್ ಬಂದಿದೆ.!
ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಡಿ.8ರಿಂದ ಹತ್ತು ದಿನ ಅಧಿವೇಶನ ನಡೆಯಲಿರುವ ಹಿನ್ನೆಲೆ ರಾಜ್ಯದ ವಿವಿಧ ಭಾಗಗಳಿಂದ ಜನಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರು, ಪೊಲೀಸ್ ಅಧಿಕಾರಿಗಳು ಸೇರಿ 8,500ಕ್ಕೂ ಅಧಿಕ ಜನ ನಗರಕ್ಕೆ ಆಗಮಿಸುತ್ತಿದ್ದಾರೆ. ಇವರಿಗೆ ವಸತಿ ಸೌಲಭ್ಯಕ್ಕಾಗಿ ಲಾಡ್ಜ್‌ಗಳ ಜತೆಗೆ 8ರಿಂದ 10 ಮಹಡಿಯ ಅಪಾರ್ಟ್‌ಮೆಂಟ್‌ಗಳಲ್ಲಿ 250ಕ್ಕೂ ಅಧಿಕ ಮನೆಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ.
ಜಿಲ್ಲಾಡಳಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆಯಲ್ಲಿನ ವಸತಿಗೃಹಗಳು ಗಣ್ಯವ್ಯಕ್ತಿಗಳಿಗೆ ಕಾಯ್ದಿರಿಸಲಾಗಿದೆ. ಐಷಾರಾಮಿ ಹೋಟೆಲ್‌ಗಳು ಸೇರಿ ಸಾಮಾನ್ಯ ಲಾಡ್ಜ್‌ಗಳಲ್ಲಿ 3,000 ಕೊಠಡಿ ಬುಕ್ಕಿಂಗ್ ಮಾಡಿದೆ. ಸಚಿವರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ಆಪ್ತರಿಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ. ಆಯಾ ಇಲಾಖೆಗಳು ಹಿರಿಯ ಅಧಿಕಾರಿಗಳಿಗಾಗಿ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡುತ್ತಿರುವುದರಿಂದ ನಗರದಲ್ಲಿ ಮನೆಗಳ ಬಾಡಿಗೆ ಹೆಚ್ಚಾಗಿದೆ ಎಂಬ ಚರ್ಚೆ ನಡೆದಿದೆ. ಟಿಳಕವಾಡಿ, ಸದಾಶಿವನಗರ, ರಾಣಿ ಚನ್ನಮ್ಮ ನಗರ,
ನೆಹರು ನಗರ, ಮಹಾಂತೇಶ ನಗರ, ವೈಭವ ನಗರ, ಗಾಂಧಿನಗರ ಸೇರಿ ವಿವಿಧ ಪ್ರದೇಶಗಳಲ್ಲಿರುವ 150ಕ್ಕೂ ಅಧಿಕ ಅಪಾರ್ಟಮೆಂಟ್‌ಗಳಲ್ಲಿ 200ಕ್ಕೂ ಅಧಿಕ ಮನೆಗಳನ್ನು ಬಾಡಿಗೆ ಆಧಾರ ಮೇಲೆ ಪಡೆದುಕೊಳ್ಳುತ್ತಿದ್ದಾರೆ.
ಬೆಳಗಾವಿಯಲ್ಲಿ ಸಾಮಾನ್ಯ ದಿನಗಳಲ್ಲಿ ಐಷಾರಾಮಿ ಹೋಟೆಲ್‌ಗಳಲ್ಲಿ ಕೊಠ ದರ ದಿನಕ್ಕೆ 3,000 ರೂ.ದಿಂದ ಆರಂಭವಾಗುತ್ತದೆ. ಅದೀಗ 3,400 ರೂ.ಗೆ ಹೆಚ್ಚಳವಾಗಿದೆ. ಲಾಡ್ಜ್‌ಗಳಲ್ಲಿ ರೂಮ್‌ಗಳ ದರ ದಿನಕ್ಕೆ 400 ರೂ.ದಿಂದ ಆರಂಭವಾಗಿ 1,200 ರೂ. ವರೆಗೆ ಇರುತಿತ್ತು. ಅದೀಗ 550 ರೂ. ಆರಂಭವಾಗಿ 1,600 ರೂ.ವರೆಗೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಖಾಸಗಿ ವಾಹನಗಳಿಗೆ ಬೇಡಿಕೆ: ಅಧಿವೇಶನಕ್ಕೆ ಬರುವ ಅಧಿಕಾರಿಗಳು, ಸಚಿವರು, ಶಾಸಕರು, ಪಕ್ಷದ ಕಾರ್ಯಕರ್ತರು ಶನಿವಾರ ಮತ್ತು ಭಾನುವಾರ ದಾಂಡೇಲಿ, ಗೋವಾ ಬೀಚ್, ಮಹಾರಾಷ್ಟ್ರದ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಹೋಗಲು ಯೋಜನೆ ಹಾಕಿದ್ದಾರೆ. ಹೀಗಾಗಿ ನಗರದಲ್ಲಿರುವ ಟೂರ್ ಆ್ಯಂಡ್ ಟ್ರಾವೆಲ್ಸ್ ಕಾರುಗಳ ಬುಕ್ಕಿಂಗ್ ಹೆಚ್ಚಳವಾಗಿದೆ. ಅಲ್ಲದೆ, ಗೋವಾ ರಾಜ್ಯದಿಂದ 150ಕ್ಕೂ ಅಧಿಕ ಟೂರಿಸ್ಟ್ ವಾಹನಗಳು ಬೆಳಗಾವಿಗೆ ಬರುತ್ತಿರುವುದು ವಿಶೇಷ ಎನ್ನಲಾಗಿದೆ.
ವೆಚ್ಚದಲ್ಲಿ ಹೆಚ್ಚಳ: ಈ ಬಾರಿ ಹೋಟೆಲ್, ಲಾಡ್ಜಗಳಲ್ಲಿ ಕೊಠಡಿ, ಉಪಾಹಾರ, ಊಟ, ವಸತಿ ದರಗಳು ಹೆಚ್ಚಳವಾಗಿದೆ. ಕೆಲ ಐಷಾರಾಮಿ ಹೋಟೆಲ್‌ಗಳಲ್ಲಿ ದರ ಎರಡುಪಟ್ಟ ಹೆಚ್ಚಳವಾಗಿರುವುದರಿಂದ ಈ ವಸತಿ ವೆಚ್ಚದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಹತ್ತು ದಿನಗಳ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ವಸತಿಗಾಗಿಯೇ
4-5 ಕೋಟಿ ರೂ. ವೆಚ್ಚವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"

ಈ ಬಾರಿ ಚಳಿಗಾಲ ಅಧಿವೇಶನಕ್ಕಾಗಿ ನಗರದ ವಿವಿಧ ಲಾಡ್ಜ್‌ಗಳಲ್ಲಿ ಒಟ್ಟು 3,000 ಕೊಠಡಿಗಳನ್ನು ಬುಕ್ಕಿಂಗ್ ಮಾಡಲಾಗಿದೆ. ಅಗತ್ಯವಿದ್ದರೆ ಮಾತ್ರ ಹೆಚ್ಚುವರಿ ಕೊಠಡಿ ಪಡೆದುಕೊಳ್ಳಲು ವಸತಿ ಸಮಿತಿಗೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net