ಶಾಸಕ ಸವದಿ ವಿರುದ್ಧದ ಆರೋಪ ಸುಳ್ಳು

ಅಥಣಿ ಪಟ್ಟಣದಲ್ಲಿ ಬಿಡಿಸಿಸಿ ಬ್ಯಾಂಕ್ ಸಿಬ್ಬಂದಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚೇತನ ದಳವಾಯಿ, ಮಾಯಪ್ಪ ಅಡಲಗಿ, ಮಹೇಶ ಮಾಳಿ, ಶಿವಾನಂದ ಬುರುಡ, ಹನುಮಂತ ಸಂಕ್ರಟ್ಟಿ ಇತರರಿದ್ದರು.
ಅಥಣಿ ಪಟ್ಟಣದಲ್ಲಿ ಬಿಡಿಸಿಸಿ ಬ್ಯಾಂಕ್ ಸಿಬ್ಬಂದಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚೇತನ ದಳವಾಯಿ, ಮಾಯಪ್ಪ ಅಡಲಗಿ, ಮಹೇಶ ಮಾಳಿ, ಶಿವಾನಂದ ಬುರುಡ, ಹನುಮಂತ ಸಂಕ್ರಟ್ಟಿ ಇತರರಿದ್ದರು.
Published on
ಅಥಣಿ: ಬಿಡಿಸಿಸಿ ಬ್ಯಾಂಕ್ ಯೂನಿಯನ್ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ೮೦ ಲಕ್ಷದ ವಾಹನ ಖರೀದಿಗೆ ಪ್ರತಿ ಸಿಬ್ಬಂದಿಯಿಂದ ೧೦ ಸಾವಿರ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದರು. ಹಣ ಕೊಡದೇ ಇದ್ದದ್ದಕ್ಕೆ ನಮ್ಮ ಮನೆಗೆ ಬಂದು ನಿಮ್ಮನ್ನು ವರ್ಗಾವಣೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದು ಬ್ಯಾಂಕ್ ಸಿಬ್ಬಂದಿ ಚೇತನಕುಮಾರ ದಳವಾಯಿ ಆರೋಪಿಸಿದ್ದಾರೆ.
ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ವಿಚಾರವಾಗಿ ಮಾತನಾಡಲು ಬ್ಯಾಂಕ್ ನಿರ್ದೇಶಕ ಶಾಸಕ ಲಕ್ಷ್ಮಣ ಸವದಿ ಮನೆಗೆ ಹೋಗಿದ್ದರು. ಸಮಸ್ಯೆಯನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಗಮನಕ್ಕೆ ತಂದು ಬಗೆಹರಿಸಿಕೊಳ್ಳಿ ಎಂದು ಶಾಸಕ ಸವದಿ ಅವರನ್ನು ಹೊರಗೆ ಕಳುಹಿಸಿದ್ದರು. ಆ ವೇಳೆ ಅಲ್ಲಿದ್ದ ದಲಿತ ಮುಖಂಡನಿಗೆ ನಿಂಗಪ್ಪ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಬಳಿಕ ನಡೆದ ಗಲಾಟೆಯಲ್ಲಿ ಅವರಿಗೆ ಗಾಯವಾಗಿದೆ. ಶಾಸಕ ಲಕ್ಷ್ಮಣ ಹಾಗೂ ಅವರ ಪತ್ರ ಚಿದಾನಂದ ಹಲ್ಲೆ ಮಾಡಿದ್ದಾರೆ ಎಂಬ ನಿಂಗಪ್ಪ ಆರೋಪ ಸುಳ್ಳು. ವೈಯಕ್ತಿಕ ಕಾರಣದಿಂದ ಈ ಘಟನೆ ನಡೆದಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ಅಧಿಕಾರಿ ಮಾಯಪ್ಪ ಅಡಲಗಿ ಮಾತನಾಡಿ, ನಿನ್ನೆ ನಡೆದ ಘಟನೆಯಲ್ಲಿ ಶಾಸಕರ ಕುಟುಂಬದ ಹಸ್ತಕ್ಷೇಪ ಇಲ್ಲ. ವಾಹನ ಖರೀದಿಗೆ ೧೦ ಸಾವಿರ ರೂ. ಹಣ ನೀಡದೇ ಇದ್ದುದ್ದರಿಂದ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದರು. ಹಣ ಕೊಡದೇ ಇದ್ದಲ್ಲಿ ವರ್ಗಾವಣೆ ಮಾಡಿಸುವುದಾಗಿ ಬೆದರಿಕೆ ಒಡ್ಡುತ್ತಿದ್ದರು. ಈ ಕುರಿತು ಅಥಣಿ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಅವರೊಂದಿಗೆ ಮೂವರು ಸೇರಿ ನಮ್ಮನೆಗೆ ಬಂದು ಗಲಾಟೆ ಮಾಡಿದ್ದರು. ಸಂಘದಲ್ಲಿ ೫೨ ಜನ ಸದಸ್ಯರಿದ್ದೇವೆ. ಎಲ್ಲರಿಗೂ ಈ ರೀತಿ ಕಿರುಕುಳ ನೀಡಿದ್ದಾರೆ. ಶಾಸಕ ಸವದಿ ವಿರುದ್ಧ ಅವರು ಮಾಡಿರುವ ಆರೋಪ ಸುಳ್ಳು ಎಂದರು. ಬಿಡಿಸಿಸಿ ಬ್ಯಾಂಕ್ ಸಿಬ್ಬಂದಿ ಮಹೇಶ ಮಾಳಿ, ಶಿವಾನಂದ ಬುರುಡ, ಹನುಮಂತ ಸಂಕ್ರಟ್ಟಿ, ಗೈಬುಸಾಬ್ ಮಕಾನದಾರ್, ಸಿದ್ಧಾರೂಢ ಗುಮ್ತಾಜ್, ಮಹಾದೇವ ಉಳ್ಳಾಗಡ್ಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net