ಜಿಲ್ಲೆಯಲ್ಲಿ ಮಲಪ್ರಭಾ ನದಿಗೆ ಎರಡು ಕಡೆ, ಘಟಪ್ರಭಾ ನದಿಗೆ ಒಂದು ಕಡೆ ಮತ್ತು ಕೃಷ್ಣ ನದಿಗೆ ಮೂರು ಕಡೆ ನೀರಿನ ಮಾದರಿ ಸಂಗ್ರಹಿಸಿ ವಿಶ್ಲೇಷಣೆ ಮಾಡಲಾಗುತ್ತಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಲಪ್ರಭಾ ಮತ್ತು ಕೃಷ್ಣ ನದಿಯನ್ನು ಕಲುಷಿತ ಪಟ್ಟಿಗೆ ಸೇರಿಸಿದ್ದು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಲಿನ್ಯ ಕಡಿಮೆ ಮಾಡಲು ಕ್ರಿಯಾ ಯೋಜನೆ ರೂಪಿಸಿದೆ ಎಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ರಾಜ್ಯದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಗಾಗಿ 50 ವರ್ಷ ಪೂರೈಸಿರುವ ಹಿನ್ನಲೆ ಪ್ರತಿ ಜಿಲ್ಲೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯುವ ಪೀಳಿಗೆಗೆ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಮಾಲಿನ್ಯ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಂಡಳಿಯಿಂದ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಪರಿಸರ ವಲಯದಲ್ಲಿ ಒಳ್ಳೆಯ ಕೆಲಸ ಮಾಡಿರುವ ವ್ಯಕ್ತಿಗಳು, ಸಂಘ ಸಂಸ್ಥೆಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮಗಳನ್ನು ಮಂಡಳಿ ಹಮ್ಮಿಕೊಳ್ಳಬೇಕು ಎಂದರು. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಜ್ಯ ಉಪಾಧ್ಯಕ್ಷ ಸುನೀಲ ಹನುಮನ್ನವರ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ., ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಎಸ್ಪಿ ಡಾ.ಭೀಮಾಶಂಕರ ಗುಳೇದ ಇತರರಿದ್ದರು.