40ವರ್ಷಗಳ ಹೋರಾಟವೇ ನಮ್ಮ ಇತಿಹಾಸ; ಸತೀಶ ಜಾರಕಿಹೊಳಿ

ಅಪಪ್ರಚಾರ ಮಾಡುವವರಿಗೆ ಇತಿಹಾಸ, ಜ್ಞಾನದ ಕೊರತೆ
40 years of struggle is our history; Satish Jarkiholi
ಬೆಳಗಾವಿ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಸತೀಶ ಜಾರಕಿಹೊಳಿ ಮಾತನಾಡಿದರು. ಸುನೀಲ ಹನಮ್ಮನ್ನವರ ಇದ್ದರು.
Published on: 

ಬೆಳಗಾವಿ:ಇತಿಹಾಸದ ಅರಿವು ಹಾಗೂ ಜ್ಞಾನದ ಕೊರತೆ ಇರುವವರು ಜಾರಕಿಹೊಳಿ ಕುಟುಂಬದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಎಷ್ಟು ದಿನ ಅಪಪ್ರಚಾರ ಮಾಡುತ್ತಾರೋ ಮಾಡಲಿ. ಸೂಕ್ತ ಸಂದರ್ಭದಲ್ಲಿ, ಅವಕಾಶ ಸಿಕ್ಕಾಗ ಉತ್ತರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 30 ರಿಂದ 40 ವರ್ಷಗಳ ಕಾಲ ನಿರಂತರ ಹೋರಾಟದ ಹಾದಿಯಲ್ಲಿ ಬಂದಿರುವ ನಮ್ಮ ಇತಿಹಾಸ ತಿಳಿದುಕೊಳ್ಳದೆ ಅಪಪ್ರಚಾರ ಮಾಡುವವರಿಗೆ ಹೆಚ್ಚಿನ ಆದ್ಯತೆ ನೀಡುವುದಿಲ್ಲ ಎಂದರು.

ಬೆಳಗಾವಿ ರಾಜ್ಯೋತ್ಸವಕ್ಕೆ ವಿಶೇಷ ಅನುದಾನ ನೀಡಬೇಕು ಎಂದು ಮನವಿ ಬಂದಿದ್ದು, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು. ಹೆಚ್ಚಿನ ಅನುದಾನ ಬಿಡುಗಡೆಯಾದರೆ ರಾಜ್ಯೋತ್ಸವ ಆಚರಣೆಗೆ ಅನುಕೂಲವಾಗಲಿದೆ. ರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಕನ್ನಡಾಭಿಮಾನಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸುವುದು ಮುಖ್ಯವಾಗಿದೆ. ಇದಕ್ಕಾಗಿ ಸೂಕ್ತ ನೇತೃತ್ವ ಹಾಗೂ ಉತ್ತಮ ನಿರ್ವಹಣೆ ಅಗತ್ಯವಿದೆ. ವ್ಯವಸ್ಥಿತವಾಗಿ ಯೋಜನೆ ರೂಪಿಸಿ ನಿರ್ವಹಣೆ ಮಾಡಿದರೆ ರಾಜ್ಯೋತ್ಸವಕ್ಕೆ ಆಗಮಿಸುವ ಎಲ್ಲ ಕನ್ನಡಾಭಿಮಾನಿಗಳಿಗೂ ಊಟದ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿದೆ.

ಹಿಂದಿನ ಸರ್ಕಾರದಲ್ಲಿಯೂ ಎರಡು ವರ್ಷಗಳ ಬಳಿಕ ಗುತ್ತಿಗೆದಾರರ ಬಿಲ್‌ಗಳನ್ನು ಪಾವತಿಸಲಾಗಿತ್ತು. ಪ್ರಸ್ತುತ ಸರ್ಕಾರದಲ್ಲಿಯೂ ಇದೇ ರೀತಿಯ ಪ್ರಕ್ರಿಯೆ ಮುಂದುವರಿದಿದೆ. ಆದರೆ ಆಡಳಿತದಲ್ಲಿ ಸುಧಾರಣೆಗಳಾಗಿದ್ದು, ಅರ್ಹತೆ ಹಾಗೂ ನಿಯಮಗಳ ಆಧಾರದ ಮೇಲೆ ಬಿಲ್‌ಗಳನ್ನು ಪಾವತಿಸಲಾಗುವುದು. ಗುತ್ತಿಗೆದಾರರ ನಡುವೆ ತಾರತಮ್ಯ ಮಾಡಲಾಗುವುದಿಲ್ಲ. ಗುತ್ತಿಗೆದಾರರ ಬಗ್ಗೆ ಸರ್ಕಾರಕ್ಕೆ ಗೌರವವಿದ್ದು, ಅವರ ವಿಶ್ವಾಸವನ್ನು ಉಳಿಸಿಕೊಳ್ಳಲಾಗುವುದು.ಕೇಂದ್ರ ಸರ್ಕಾರ ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿತ್ತು. ಆದರೆ, ಆ ಭರವಸೆ ಈಡೇರದ ಹಿನ್ನೆಲೆಯಲ್ಲಿ ಜನರು ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಸುನೀಲ ಹನಮ್ಮನ್ನವರ ಇದ್ದರು.

.........

ಕೋಟ್ಸ್

ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಎದುರಿಸಲು ನಾವು ಸಿದ್ಧರಿದ್ದು,ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.

- ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

.......

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net