ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಸಭೆ ನಡೆಸಿದರು. ಅಶೋಕ ಚಂದರಗಿ, ಮಹಾದೇವ ತಳವಾರ, ವಾಜೀದ್ ಹಿರೇಕೋಡಿ, ಮಲ್ಲಪ್ಪ ಅಕ್ಷರದ, ಸಾಗರ ಬೋರಗಲ್ಲ ಇತರರಿದ್ದರು.
ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಪರ ಗಟ್ಟಿಯಾಗಿ ವಾದ ಮಂಡಿಸಲು ರಾಜ್ಯ ಸರ್ಕಾರವು ತನ್ನ ಕಾನೂನು ತಂಡ ಬಲಪಡಿಸಬೇಕು ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಗ್ರಹಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ವಿವಿಧ ಕನ್ನಡ ಪರ ಸಂಘಟನೆಗಳು ಹಮ್ಮಿಕೊಂಡಿದ್ದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸುಪ್ರೀಂ ಕೋರ್ಟ್‌ನಲ್ಲಿ ಮಹಾರಾಷ್ಟ್ರ ಸರ್ಕಾರ ದಾಖಲಿಸಿರುವ ಪ್ರಕರಣದ ಮುಂದಿನ ವಿಚಾರಣೆ 2026ರ ಜನವರಿ 21ರಂದು ನಡೆಯಲಿದೆ. ಆ ವೇಳೆಗೆ ಕಾನೂನು ತಂಡಕ್ಕೆ ಮಾರ್ಗದರ್ಶನ ನೀಡಲು ಸರ್ಕಾರ ತಜ್ಞರ ಸಮಿತಿ ನೇಮಿಸಬೇಕು ಎಂದರು.
ಗಡಿ ವಿವಾದ ಪ್ರಕರಣದಲ್ಲಿ ವಾದ ಮಂಡಿಸಲು ಒಬ್ಬ ವಕೀಲರನ್ನು ಹೊರತುಪಡಿಸಿ, ಉಳಿದವರು ಉತ್ತರ ಭಾರತದವರಿದ್ದಾರೆ. ಹಾಗಾಗಿ, ಈ ಪ್ರಕರಣದ ಸಮರ್ಥನೆಗೆ ರಾಜ್ಯದ ವಕೀಲರು ಇರಬೇಕು. ಕನ್ನಡ ಸಂಘಟನೆಗಳ ಬೇಡಿಕೆ ನಂತರ ಸರ್ಕಾರ ಕಾನೂನು ಸಚಿವ ಎಚ್.ಕೆ.ಪಾಟೀಲರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಿಸಿತು. ರಾಜ್ಯದ ಕಾನೂನು ತಂಡ ಬಲಪಡಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಹಿರಿಯ ವಕೀಲರಾದ ಮೋಹನ ಕಾತರಕಿ, ಅಶೋಕ ಹಾರನಹಳ್ಳಿ ಮತ್ತು ಕಪಿಲ್ ಸಿಬಲ್ ಅವರ ಸಭೆಯನ್ನು ರಾಜ್ಯ ಸರ್ಕಾರ ಕರೆಯಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಗಡಿ ಮತ್ತು ನದಿಗಳ ಸಂರಕ್ಷಣಾ ಆಯೋಗದ ಕಚೇರಿಯನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಿ, ಈ ಭಾಗದ ನಿವೃತ್ತ ಐಎಎಸ್ ಅಧಿಕಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು.ಮಹಾರಾಷ್ಟ್ರ ಏಕೀಕರಣ ಸಮಿತಿ ಕರಾಳ ದಿನ ಆಚರಿಸುವುದನ್ನು ತಡೆಯಲು ಕರ್ನಾಟಕ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿರುವ ಮಲ್ಲಪ್ಪ ಅಕ್ಷರದ, ಕರಾಳ ದಿನ ಆಚರಣೆಗೆ ಎಂಇಎಸ್‌ಗೆ ಅವಕಾಶ ಕೊಟ್ಟಿರುವ ಜಿಲ್ಲಾಡಳಿತದ ದ್ವಂದ್ವನೀತಿಯನ್ನು ನ್ಯಾಯಾ ಲಯದ ಗಮನಕ್ಕೆ ತರುತ್ತೇನೆ ಎಂದರು.