ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ; ಸಂತ್ರಸ್ತೆಯ ಆರೋಗ್ಯ ವಿಚಾರಿಸಿದ ಗೃಹ ಸಚಿವ ಪರಮೇಶ್ವರ್​

parmeshwar 1
Published on

ಬೆಳಗಾವಿ: ತಾಲೂಕಿನ ಹೊಸ ವಂಟಮೂರಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದು, ಗಾಯಗೊಂಡ ಮಹಿಳೆಯನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಆಸ್ಪತ್ರೆಗೆ ದೌಡಾಯಿಸಿದ ಗೃಹಸಚಿವ ಡಾ.ಜಿ.ಪರಮೇಶ್ವರ ಮಹಿಳೆಯ ಆರೋಗ್ಯ ವಿಚಾರಿಸಿದರು.

ಮಹಿಳೆ ಆರೋಗ್ಯದ ಸ್ಥಿತಿ ಕುರಿತು ವೈದ್ಯರಿಂದ ಮಾಹಿತಿ ಪಡೆದರು. ಅವರ ಮೇಲೆ ನಿಗಾ ವಹಿಸುವಂತೆ ಅವರು ಸೂಚನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯನ್ನು ಬೆತ್ತಲೆಗೊಳಿಸಿ, ಥಳಿಸಿರುವುದು ಅಮಾನವೀಯ ಘಟನೆ. ನಡೆಯಬಾರದು ನಡೆದಿದೆ. 24 ವರ್ಷದ ಯುವಕ ದುಂಡಪ್ಪ ಹಾಗೂ ಪ್ರಿಯಾಂಕ ಎಂಬ ಯುವತಿಯ ಪ್ರೇಮ ಪ್ರಕರಣ ಇದಕ್ಕೆ ಕಾರಣವಾಗಿದೆ. 8ರಿಂದ 10 ಜನ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ಈಗಾಗಲೇ 7 ಮಂದಿಯನ್ನು ಬಂಧಿಸಲಾಗಿದೆ. ಇನ್ನಿಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದರು.

ಓಡಿ ಹೋದ ಹುಡುಗ- ಹುಡುಗಿಯ ಬಗ್ಗೆಯೂ ಕಾಳಜಿ ವಹಿಸಬೇಕಿದೆ. ಅವರನ್ನು ಪೊಲೀಸರು ಹುಡುಕಾಡುತ್ತಿದ್ದಾರೆ ಎಂದರು.
ನಗರ ಪೊಲೀಸ್‌ ಆಯುಕ್ತ ಎಸ್.ಎನ್.ಸಿದ್ರಾಮಪ್ಪ ಇತರ ಅಧಿಕಾರಿಗಳು ಸ್ಥಳದಲ್ಲಿದ್ದರು.

ಏನಿದು ಘಟನೆ?
ವಂಟಮೂರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ ಮಹಿಳೆಯ ಮಗ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಯುವತಿಯ ಕುಟುಂಬಸ್ಥರು ಅವರ ಪ್ರೀತಿಯನ್ನು ಒಪ್ಪದ ಕಾರಣ, ಇಬ್ಬರೂ ಊರು ಬಿಟ್ಟು ಹೋಗಿದ್ದರು. ಇದರಿಂದ ಕೋಪಗೊಂಡ ಯುವತಿಯ ಕುಟುಂಬಸ್ಥರು ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಹಲ್ಲೆಗೈದು ವಿಕೃತಿ ಮೆರೆದಿದ್ದಾರೆ ಎಂದು ತಿಳಿದುಬಂದಿದೆ.

ಯುವತಿ ಪ್ರಿಯಾಂಕಾ ಕುಟುಂಬಸ್ಥರು ಬೇರೆ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿ, ‘ಯಾದಿ ಮೇಲೆ ಶಾದಿ’ ಮಾಡಲು ಮುಂದಾಗಿದ್ದರು. ಹೀಗಾಗಿ, ಪ್ರಿಯಾಂಕಾ ತಾನು ಪ್ರೀತಿಸುತ್ತಿದ್ದ ಯುವಕ ದುಂಡಪ್ಪ ಜೊತೆ ಭಾನುವಾರ ಮಧ್ಯರಾತ್ರಿ ಊರು ಬಿಟ್ಟು ಹೋಗಿದ್ದರು. ಇದನ್ನು ತಿಳಿದ ಆಕೆಯ ಕುಟುಂಬಸ್ಥರು, ಯುವಕನ ಮನೆಗೆ ನುಗ್ಗಿ, ಮನೆಯಲ್ಲಿ ಮಲಗಿದ್ದ ಯುವಕನ ತಾಯಿ ಕಮಲವ್ವ ಅವರನ್ನು ಎಳೆದುಕೊಂಡು ಬಂದು ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ಘಟನೆ ಸಂಬಂಧ ಬೆಳಗಾವಿಯ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಒಂಬತ್ತು ಮಂದಿಯನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ. ಅವರಲ್ಲಿ, ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net