

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಚುನಾವಣೆ ಶುಕ್ರವಾರ ಪಾಲಿಕೆ ಮೇಯರ್ ನೇತೃತ್ವದಲ್ಲಿ ನಡೆದಿದ್ದು, 4 ಸಮಿತಿ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪ್ರತಿ ಸ್ಥಾಯಿ ಸಮಿತಿಯಲ್ಲಿದ್ದ 7 ಜನ ಸದಸ್ಯರ ಪೈಕಿ 5 ಜನರು ಬಿಜೆಪಿ ಸದಸ್ಯರಿದ್ದರು. ಹೀಗಾಗಿ ಅವಿರೋಧ ಆಯ್ಕೆ ನಡೆಯಿತು. 4 ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ 4 ಸದಸ್ಯರಷ್ಟೇ ನಾಮಪತ್ರ ಸಲ್ಲಿಸಿದ್ದರು. ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ತೆರಿಗೆ ನಿರ್ಧರಣೆ ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿಗೆ ವೀಣಾ ಶ್ರೀಶೈಲ ವಿಜಾಪುರೆ, ಸಾರ್ವಜನಿಕ ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ರವಿ ಕೃಷ್ಣಾ ಧೋತ್ರೆ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ ವಾಣಿ ವಿಲಾಸ ಜೋಶಿ, ಲೆಕ್ಕಗಳ ಸ್ಥಾಯಿ ಸಮಿತಿಗೆ ಸವಿತಾ ಮುರಗೇಂದ್ರಗೌಡ ಪಾಟೀಲ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಮೇಯರ್ ಶೋಭಾ ಸೋಮನಾಚೆ ಅವರು ಚುನಾವಣೆಯಲ್ಲಿ ಅಧ್ಯಕ್ಷಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಅದಕ್ಕೂ ಮೊದಲು ಶಾಸಕ ಅಭಯ್ ಪಾಟೀಲ, ಮಾಜಿ ಶಾಸಕ ಅನಿಲ ಬೆನಕೆ ಅವರು ಸ್ಥಾಯಿ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿ, ಒಮ್ಮತದ ವ್ಯಕ್ತಿಯನ್ನು ಆರಿಸಿ ಗೊಂದಲ ಬಗೆಹರಿಸಿದ್ದರಿಂದ ಅಧ್ಯಕ್ಷರ ಆಯ್ಕೆ ಸರಳವಾಗಿ ನಡೆಯಿತು.