ಬೆಳಗಾವಿ ತಹಸೀಲ್ದಾರ್ ಮರು ನೇಮಕಕ್ಕೆ ಶೆಟ್ಟರ್ ವಿರೋಧ

Jagadeesha Shetter
Published on

ಬೆಳಗಾವಿ: ಇಲ್ಲಿನ ತಾಲೂಕು ತಹಸೀಲ್ದಾರ್ ಕಚೇರಿಯಲ್ಲಿ ಎಸ್‌ಡಿಸಿ ರುದ್ರಣ್ಣ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ತಹಸೀಲ್ದಾರ್ ಬಸವರಾಜ ನಾಗರಾಳ ಮರುನೇಮಕಕ್ಕೆ ಸಂಸದ ಜಗದೀಶ ಶೆಟ್ಟರ್ ವಿರೋಧ ವ್ಯಕ್ತಪಡಿಸಿದ್ದಾರೆ.

ನೌಕರ ರುದ್ರಣ್ಣ ಆತ್ಮಹತ್ಯೆ ಪ್ರಕರಣದಲ್ಲಿ ನೇರ ಆರೋಪ ಎದುರಿಸುತ್ತಿರುವ ಬಸವರಾಜ ನಾಗರಾಳ ಅವರನ್ನು ಪುನಃ ಬೆಳಗಾವಿ ತಾಲೂಕು ತಹಸೀಲ್ದಾರ್ ಹುದ್ದೆಗೆ ನೇಮಕ ಮಾಡಿದ್ದು ಸರಿಯಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೆ ಅದೇ ಹುದ್ದೆಗೆ ಹಿಂದಿನ ತಹಸೀಲ್ದಾರ್‌ರನ್ನು ನೇಮಕ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಪತ್ರ ಬರೆಯಲಾಗಿದೆ ಎಂದರು.

ಆರೋಪಿ ಸ್ಥಾನದಲ್ಲಿರುವ ಅಧಿಕಾರಿ ನೇಮಕ ಮಾಡುವುದರಿಂದ ಇತರೆ ನೌಕರರಿಗೆ ತಪ್ಪು ಸಂದೇಶ ಹೋಗುತ್ತದೆ. ಕಿರುಕುಳ ನೀಡುವ ಅಧಿಕಾರಿಗಳಿಗೆ ಮಣೆ ಹಾಕಿದಂತಾಗುತ್ತದೆ. ತಹಸೀಲ್ದಾರ್ ಕಾರ್ಯವೈಖರಿ ಖಂಡಿಸಿ ಅನೇಕ ಸಂಘಟನೆಗಳು ಕೂಡ ವಿರೋಧ ವ್ಯಕ್ತಪಡಿಸಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

ಭ್ರಷ್ಟ ಅಧಿಕಾರಿಗಳಿಗೆ ಮಣೆ ಹಾಕುವುದನ್ನು ಬಿಟ್ಟು ಪ್ರಾಮಾಣಿಕ ಅಧಿಕಾರಿ ನೇಮಕ ಮಾಡಬೇಕೆಂದು ಸಂಸದ ಜಗದೀಶ ಶೆಟ್ಟರ್ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net