ಮಠಾದೀಶರನ್ನು ಕಡೆಗಣಿಸಿದರೇ ಸರ್ಕಾರ ಬೀಳುವುದು ನಿಶ್ಚಿತ

IMG-20230829-WA0027.jpg
Published on

ಬೆಳಗಾವಿ : ಶಿವಾಪುರದ ಮುಪ್ಪಿನ ಕಾಡಸಿದ್ದೇಶ್ವರ ಸ್ವಾಮೀಜಿ ಕಾರು ಅಪಘಾತದಲ್ಲಿ ಮೃತರಾಗಿದ್ದ ಇಬ್ಬರು ಭಕ್ತರಿಗೆ ಸೂಕ್ತ ಪರಿಹಾರ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ನಾಡಿನ ಮಠಾಧೀಶರನ್ನು ಕಡೆಗಣಿಸುತ್ತಿರುವುದನ್ನು ಹೀಗೆ ಮುಂದುವರಿಸಿದರೆ ರಾಜ್ಯ ಸರ್ಕಾರಕ್ಕೆ ಮಠಾಧೀಶರ ಶಾಪ ತಟ್ಟಿ, ಸರ್ಕಾರ ಪತನವಾಗುವುದು ನಿಶ್ಚಿತ ಎಂದು ಸಿದ್ದನಕೊಳ್ಳ ಮಠದ ಗಂಗಾಧರ ಸ್ವಾಮೀಜಿ ಎಚ್ಚರಿಕೆ ನೀಡಿದರು.
 

ನಗರದಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್.17 ರಂದು ದುರಂತ ನಡೆದರೂ ಈ ವರೆಗೂ ಪರಿಹಾರ ಕಲ್ಪಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಬೇರೆಯವರು ತೀರಿಕೊಂಡಾಗ 20 ಲಕ್ಷ ಪರಿಹಾರ ನೀಡುತ್ತಾರೆ, ಹಾಗಾಗಿ ನಮ್ಮ ಭಕ್ತರಿಗೆ ಎಷ್ಟು ಪರಿಹಾರ ನೀಡಬೇಕು ಅಂತಾ ಸರ್ಕಾರವೇ ನಿರ್ಧರಿಸಲಿ. ಇನ್ನು ಇವರ ನಡವಳಿಕೆ ನೋಡಿದರೆ ಸ್ವಾಮೀಜಿಗಳ ವಿರೋಧಿಯಂತೆ ಕಾಣಿಸುತ್ತಿದೆ ಎಂದು ಆರೋಪಿಸಿದರು.

ಮುನವಳ್ಳಿಯ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ಸರ್ಕಾರದಲ್ಲಿ ಹಿಡಿತ ಹೊಂದಿರುವ ನಾಡಿನ ದೊಡ್ಡ ದೊಡ್ಡ ಮಠಾಧೀಶರು, ತಪ್ಪು ದಾರಿಯಲ್ಲಿ ನಡೆಯುತ್ತಿರುವ ಸರಕಾರದ ಕಿವಿ ಹಿಂಡಿ, ಬುದ್ಧಿ ಹೇಳಬೇಕು. ತಾರತಮ್ಯ ನೀತಿ ಕೈ ಬಿಡುವಂತೆ ಮಾರ್ಗದರ್ಶನ ನೀಡಬೇಕು. ಸಣ್ಣ ಸ್ವಾಮೀಜಿಗಳಿಗೆ ತೊಂದರೆ ಆದಾಗ ಮುಂದೆ ಬರುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.

ಬೆಳಗಾವಿಯ ರುದ್ರಕೇಸರಿ ಮಠದ ಹರಿಗುರು ಮಹಾರಾಜರು ಮಾತನಾಡಿ, ಮೃತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ 20ಕ್ಕೂ ಹೆಚ್ಚು ಬಾರಿ ಮನವಿ ಸಲ್ಲಿಸಿದ್ದೇವೆ. ಇಂದು ಕೊನೆಯ ಬಾರಿ ಮನವಿ ಸಲ್ಲಿಸುತ್ತಿದ್ದು, ಮುಂದೆ ಸ್ವಾಮೀಜಿಗಳು ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸ್ವಾಮೀಜಿಗಳು, ಕಾರು ಅಪಘಾತದಲ್ಲಿ ಮೃತಪಟ್ಟ ಮುಪ್ಪಿನ್ ಕಾಡಸಿದ್ದೇಶ್ವರ ಮಠದ ಹುಕ್ಕೇರಿ ತಾಲೂಕಿನ ಪರಖನಟ್ಟಿ ಗ್ರಾಮದ ಪಂಚಾಕ್ಷರಿ ಹಿರೇಮಠ ಮತ್ತು ನಿಪ್ಪಾಣಿ ಬಳಿಯ ಬಾಚಣಿಯ ಪಾಂಡುರಂಗ ಜಾಧವ ಅವರ ಕುಟುಂಬಸ್ಥರಿಗೆ  ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಮೂಲಕ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಮನವಿ ರವಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net