

ಬೆಳಗಾವಿ: ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್‌ಸಿ) 2021ರ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಬೈಲಹೊಂಗಲ, ರಾಯಬಾಗ ತಾಲೂಕಿನ ಇಬ್ಬರು ಅಭ್ಯರ್ಥಿಗಳು ರ‌್ಯಾಂಕ್ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಾಹಿತ್ಯ ಮಲ್ಲಿಕಾರ್ಜುನ ಆಲದಕಟ್ಟಿ 961 ಅಂಕ ಪಡೆಯುವ ಮೂಲಕ ದೇಶಕ್ಕೆ 250ನೇ ರ‌್ಯಾಂಕ್ ಪಡೆದುಕೊಂಡಿದ್ದು, ರಾಜ್ಯಕ್ಕೆ 10ನೇ ರ‌್ಯಾಂಕ್ ಪಡೆದಿದ್ದಾರೆ. ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಗಜಾನನ ಬಾಳೆ 953 ಅಂಕ ಪಡೆದು ದೇಶಕ್ಕೆ 319 ರ‌್ಯಾಂಕ್ ಪಡೆದುಕೊಂಡಿದ್ದಾರೆ.
ಇಂಜಿನಿಯರಿಂಗ್ ಪದವಿ ಮುಗಿಸಿರುವ ಸಾಹಿತ್ಯ ಮಲ್ಲಿಕಾರ್ಜುನ ಆಲದಕಟ್ಟಿ ಅವರು ಯುಪಿಎಸ್ ಪರೀಕ್ಷೆಗಾಗಿ 2015ರಿಂದಲೇ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರು. ಇದೀಗ 5ನೇ ಪ್ರಯತ್ನದಲ್ಲಿ ಪಾಸಾಗಿದ್ದಾರೆ. ಇದಕ್ಕೂ ಮೊದಲು ಯುಪಿಎಸ್‌ಸಿ ಎರಡು ಮುಖ್ಯ ಪರೀಕ್ಷೆಗಳನ್ನು ಪಾಸಾಗಿದ್ದರು. ಆದರೆ, ಸಂದರ್ಶನದಲ್ಲಿ ಸಮಯದಲ್ಲಿ ಫೇಲ್ ಆಗಿದ್ದರು. ಇದೀಗ ಸಂದರ್ಶನದಲ್ಲಿಯೇ ಹೆಚ್ಚು ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಇಂಜಿನಿಯರಿಂಗ್ ಪದವಿ ಮುಗಿಸಿರುವ ಗಜಾನನ ಬಾಳೆ 953 ಅಂಕ ಪಡೆದು ದೇಶಕ್ಕೆ 319ನೇ ರ‌್ಯಾಂಕ್ ಪಡೆದುಕೊಂಡಿದ್ದಾರೆ. ಈ ಮೊದಲು ಇವರು 2019ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 663 ರ‌್ಯಾಂಕ್ ಪಡೆದು ಸದ್ಯ ಇಂಡಿಯಲ್ ಪೋಸ್ಟಲ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯುಪಿಎಸ್ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯ ವಿಷಯ ತೆಗೆದುಕೊಂಡು ಪಾಸಾಗಿದ್ದಾರೆ.
2013ರಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ ಬಳಿಕ ಕೆಲಸಕ್ಕಾಗಿ ಅಲೆದಾಡದೆ ಯುಪಿಎಸ್‌ಸಿ ಪರೀಕ್ಷೆಗಾಗಿ ಬೆಂಗಳೂರು, ದೆಹಲಿಯಲ್ಲಿ ತರಬೇತಿ ಪಡೆದುಕೊಂಡಿದ್ದೇನೆ. 2019ರಲ್ಲಿ ಪರೀಕ್ಷೆಯಲ್ಲಿ 663 ರ‌್ಯಾಂಕ್ ಪಡೆದುಕೊಂಡಿದ್ದೆ. ಆದರೆ, ಐಪಿಎಸ್ ಆಗಬೇಕು ಎಂಬ ಕನಸಿನೊಂದಿಗೆ ಮರಳಿ ಯುಪಿಎಸ್ ಪರೀಕ್ಷೆ ಬರೆದು 319 ರ‌್ಯಾಂಕ್ ಪಡೆದಿದ್ದು, ಈ ಬಾರಿ ಐಪಿಎಸ್ ಸಿಗುತ್ತದೆ ಎಂದು ಗಜಾನನ ಬಾಳೆ ತಿಳಿಸಿದ್ದಾರೆ.