ಹೇಗಿದೆ ಗೊತ್ತಾ ಪಬ್ಲಿಕ್ ಫ್ರೆಂಡ್ಲಿ ಪೊಲೀಸ್ ಫೋನ್ ಇನ್? 'ಹತ್ತು ಕಾರ್ಯಕ್ರಮ; ನೂರಾರು ಕಾನೂನು ಕ್ರಮ'

20230326_195918.jpg
Published on

ರವಿ ಗೋಸಾವಿ, ಬೆಳಗಾವಿ
ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸುವ ಜಿಲ್ಲಾ ಪೊಲೀಸರಿಗೆ ಸಾರ್ವಜನಿಕರಿಂದ ವ್ಯಾಪಕ ಸ್ಪಂದನೆ ದೊರೆತಿದೆ. ಕಳೆದ 9 ತಿಂಗಳ ಫೋನ್ ಇನ್ ಕಾರ್ಯಕ್ರಮದಲ್ಲಿನ ಸುಮಾರು ಐದು ನೂರು ಅರವತ್ತಕ್ಕೂ ಹೆಚ್ಚು ಕರೆಗಳಿಂದಾಗಿ ನೂರಾರು ಅಕ್ರಮಗಳಿಗೆ ಬ್ರೇಕ್ ಬಿದ್ದಿದೆ.  
 ಸಾಕಷ್ಟು ವರ್ಷದಿಂದ ಎಗ್ಗಿಲ್ಲದೇ ನಡೆಯುತ್ತಿದ್ದ ಅಕ್ರಮಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರ್ವಜನಿಕರ ಒಂದೊಂದು ಕರೆಯೂ ಫಲ ನೀಡುತ್ತಿದ್ದು, ಈವರೆಗಿನ ಫೋನ್ ಇನ್ ಕಾರ್ಯಕ್ರಮದಲ್ಲಿ ಸುಮಾರು ಐದು ನೂರು ಅರವತ್ತಕ್ಕೂ ಹೆಚ್ಚು ಕರೆಗಳಿಂದ ದೊರೆತ ಮಾಹಿತಿ, ಕೇಳಿದ ಸಹಕಾರ ಹಾಗೂ ಸ್ವೀಕರಿಸಿದ ದೂರುಗಳಿಂದಾಗಿ ಕಾನೂನು ಬಾಹಿರ ನೂರಾರು ಚಟುವಟಿಕೆಗಳಿಗೆ ಜಿಲ್ಲಾ ಪೋಲಿಸರು ಕಡಿವಾಣ ಹಾಕಿದ್ದಾರೆ.
ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವುದು ಮಾತ್ರವಲ್ಲದೇ, ಅಕ್ರಮ ದಂಧೆಕೋರರು ಹಾಗೂ ಅವರಿಗೆ ಸಹಕಾರ ನೀಡುವ ಅಧಿಕಾರಿಗಳ ಮೇಲೂ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಮಹಿಳೆಯರು, ಹಿರಿಯ ನಾಗರಿಕರು, ನೊಂದವರು ಹಾಗೂ ದೌರ್ಜನ್ಯಗೊಳಪಟ್ಟವರು ದೂರು ನೀಡಲು ಪೊಲೀಸ್ ಠಾಣೆಗಳಿಗೆ ತೆರಳಿದಾಗ ಹೇಗೆ ಸ್ಪಂದನೆ ಸಿಗುತ್ತಿದೆ ಎನ್ನುವ ಬಗ್ಗೆಯೂ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ನೇರವಾಗಿ ಸಾರ್ವಜನಿಕರಿಂದಲೇ ಮಾಹಿತಿ ಸಿಗುತ್ತಿರುವುದರಿಂದ ಇಲಾಖೆ ಆಂತರಕವಾಗಿಯೂ ಮತ್ತಷ್ಟು ಚುರುಕಾದಂತೆ ಕಾಣುತ್ತಿದೆ.
ಮಕ್ಕಳ ಸಹಾಯವಾಣಿ (1098), ಹಿರಿಯ ನಾಗರಿಕರಿಗೆ (1090), ಮಹಿಳಾ ಸಹಾಯವಾಣಿ (1091), ಪೊಲೀಸ್ ಕಂಟ್ರೋಲ್ ರೂಮ್(100) ಹಾಗೂ  ತುರ್ತು ಸ್ಪಂದನೆ (112) ಸೇರಿದಂತೆ ಹತ್ತಾರು ಸಹಾಯವಾಣಿಗಳ ಸೌಲಭ್ಯಗಳ ಹೊರತಾಗಿಯೂ ವರಿಷ್ಠಾಧಿಕಾರಿ ಅವರ ಫೋನ್ ಇನ್ ಕಾರ್ಯಕ್ರಮಕ್ಕೆ ಅತ್ಯುತ್ತಮ ಸ್ಪಂದನೆ ಸಿಗುತ್ತಿದೆ. ಪ್ರತಿ ಕರೆಗೂ ಕಿವಿಗೊಡುವ ಎಸ್ಪಿ ಡಾ.ಸಂಜೀವ ಪಾಟೀಲ ಅವರು, ದೂರು ಸ್ವೀಕರಿಸುವುದುರ ಜತೆಗೆ ಅಪರಾಧ ತಡೆಗಟ್ಟುವಲ್ಲಿ ಸಾರ್ವಜನಿಕರ ಪಾತ್ರ, ಸಂಚಾರಿ ನಿಯಮಗಳ ಪಾಲನೆ ಹಾಗೂ ವಿನಾಕಾರಣ ಸಿಬ್ಬಂದಿಯನ್ನೂ ದೂಷಿಸುವವರಿಗೆ ತಮ್ಮ ಜವಾಬ್ದಾರಿ, ಹಕ್ಕು-ಕರ್ತವ್ಯಗಳ  ಬಗ್ಗೆಯೂ ಜಾಗೃತಿ ಮೂಡಿಸುತ್ತಿರುವುದು ಇನ್ನಿತರ ಅಧಿಕಾರಿಗಳಿಗೆ ಮಾದರಿಯಾಗಿದೆ.
ಈ ಬಗ್ಗೆ ಪತ್ರಿಕೆ ಜತೆ ಮಾತನಾಡಿದ ಎಸ್ಪಿ ಡಾ.ಸಂಜೀವ ಪಾಟೀಲ ಅವರು, ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರಿಂದ ಮಾಹಿತಿ, ಸಹಕಾರ ಮತ್ತು ಸಮುದಾಯ ಪಾಲ್ಗೊಳ್ಳುವುದು ಮುಖ್ಯ. ಅವರಿಂದ ಕೇವಲ ದೂರುಗಳಷ್ಟೇ ಅಲ್ಲ, ಮಾಹಿತಿಯನ್ನೂ ಪಡೆದು ಆ ದಿನವೇ ಕಾರ್ಯಾಚರಣೆ ನಡೆಸಿ ಅವರಿಗೆ ಸಂಪೂರ್ಣ ಅಪ್ಡೇಟ್ ನೀಡಲಾಗುತ್ತಿದೆ.
ಹಳ್ಳಿಗಳಲ್ಲಿ ಅಕ್ರಮ ಮದ್ಯ, ಅನ್ನಭಾಗ್ಯ ಅಕ್ಕಿ ಸಾಗಾಟ-ಮಾರಾಟ, ಮಟ್ಕಾ, ಜೂಜಾಟ, ಗಾಂಜಾ ಬೆಳೆಯುವುದು, ನಿಯಮಗಳನ್ನು ಉಲ್ಲಂಘಿಸಿ ಜಾನುವಾರಗಳ ಸಾಗಾಟ, ಮರಳು ಸಾಗಾಟ, ಮನೆಗಳ್ಳತನ, ಸರಗಳ್ಳತನಕ್ಕೆ ಸಾಕಷ್ಟು ಕಡಿವಾಣ ಹಾಕಲಾಗಿದೆ ಎಂದರು.  

ಉದಾಸೀನಕ್ಕೆ ಉತ್ತರ ಕೇಳಿ ನೋಟಿಸ್:
ಪೊಲೀಸ್ ಠಾಣೆಗೆ ಆಗಮಿಸಿ ಮಾಹಿತಿ ಹಾಗೂ ದೂರು ನೀಡುವವರನ್ನು ಉದಾಸೀನ ಮಾಡುವ, ದಂಧೆಕೋರರ ಪರ ವಕಲಾತ್ತು ವಹಿಸುವ ತಪ್ಪಿತಸ್ಥ ಸಿಬ್ಬಂದಿಗೂ ಎಸ್ಪಿ ಡಾ.ಸಂಜೀವ ಪಾಟೀಲ ಶೋಕಾಸ್ ನೋಟಿಸ್ ನೀಡಿ ಚುರಕು ಮುಟ್ಟಿಸುತ್ತಿದ್ದಾರೆ. ಜಿಲ್ಲೆಯ ವಿವಿಧ ಉಪವಿಭಾಗಗಳ ಹತ್ತಾರು ಪೊಲೀಸ್ ಠಾಣೆಗಳ ಸಿಬ್ಬಂದಿಗೆ ಈಗಾಗಲೇ   ನೋಟಿಸ್ ನೀಡಿ ಕಾನೂನು ಕ್ರಮ ಜರುಗಿಸಿದ್ದಾರೆ. ಇಂತಹ ಬಹುತೇಕ ಶೋಕಾಸ್ ನೋಟಿಸ್ ಪಡೆದ ಸಿಬ್ಬಂದಿಗಳಲ್ಲಿ ಬಹುತೇಕರು ಮಟ್ಕಾ, ಜೂಜಾಟ ಹಾಗೂ ಅಕ್ರಮ ಮದ್ಯಮಾರಾಟಕ್ಕೆ ಪರೋಕ್ಷ ಸಹಕರಿಸಿದವೇ ಆಗಿವೆ.   ಪರಿಣಾಮವಾಗಿ ಇದೀಗ ಜಿಲ್ಲಾ ಪೊಲೀಸರ ಬೀಟ್ ವ್ಯವಸ್ಥೆ ಬಲಗೊಂಡಿದ್ದು, ಸಾಕಷ್ಟು ಅಕ್ರಮಗಳಿಗೆ ಕಡಿವಾಣ ಬೀಳುತ್ತಿದ್ದೆ. ಇದು ಹೀಗೆ ಮುಂದುವರಿಯಿಲಿ ಎನ್ನುವುದು ಜನರ ಆಶಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net