

ಬೆಳಗಾವಿ: ಬೆಳಗಾವಿಯಲ್ಲಿ ಆಚರಿಸುವ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ರಾಜ್ಯದಲ್ಲೇ ಖ್ಯಾತಿ ಗಳಿಸಿದೆ. ಶನಿವಾರ ನಡೆದ ಶಿವಾಜಿ ಜಯಂತಿಯ ಮೆರವಣಿಗೆ ವೈಭವೋಪೇತವಾಗಿ ನಡೆಯಿತು. ಹೊರ ಜಿಲ್ಲೆಗಳಿಂದಲೂ ಬಂದಿದ್ದ ಸಾವಿರಾರು ಸಂಖ್ಯೆಯ ಜನರು ಮೆರವಣಿಗೆ ದೃಶ್ಯಗಳನ್ನು ಕಣ್ತುಂಬಿಕೊಂಡರು.
ಶಿವಾಜಿ ಮಹಾರಾಜರ ಇತಿಹಾಸ ಸಾರುವ ಕಲಾಕೃತಿಗಳು, ವಾಧ್ಯ ಮೇಳಗಳು, ದೇಸಿ ಸೊಗಡಿನ ಢೋಲ-ತಾಷಾ, ಝಾಂಜ್ ಪಥಕಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.
ವಿವಿಧ ಬಡಾವಣೆಗಳ ಸಂಘ ಹಾಗೂ ಮಂಡಳಿಗಳ ರೂಪಕಗಳು ಶಿವಾಜಿಯ ಚರಿತ್ರೆಯನ್ನು ಕಟ್ಟಿಕೊಟ್ಟವು. ಯುವಕ-ಯುವತಿಯರ ಮಂಡಳದವರು, ಮಹಿಳಾ ಸಂಘ-ಸಂಸ್ಥೆಗಳು ವಿವಿಧ ಪಾತ್ರಧಾರಿಗಳು ಕಿರುನಾಟಕಗಳನ್ನು ಪ್ರದರ್ಶಿಸಿ ನೋಡುಗರ ಮೆಚ್ಚುಗೆ ಗಳಿಸಿದರು. ಶಿವಾಜಿಯ ಬಾಲ್ಯ, ಶಿಕ್ಷಣ, ಯುದ್ಧ ಕಲೆ, ಪಟ್ಟಾಭಿಷೇಕ, ಕೋಟೆಗಳನ್ನು ಗೆದ್ದು ರಾಜ್ಯಭಾರ ಮಾಡಿರುವ ಪ್ರಸಂಗಗಳು, ರಾಜತಾಂತ್ರಿಕತೆ ಹೀಗೆ ವಿವಿಧ ಸನ್ನಿವೇಶಗಳನ್ನು ಬಿಂಬಿಸುವ ನಾಟಕಗಳು ಗಮನ ಸೆಳೆದವು.
ಮಾರುತಿ ಗಲ್ಲಿ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಕಂಬಳಿಖೂಟ, ಕಾಲೇಜ್ ರಸ್ತೆ, ಬೋಗಾರ್‍ವೆಸ್ ವೃತ್ತದ ಮಾರ್ಗವಾಗಿ ಕಿರ್ಲೋಸ್ಕರ್ ರಸ್ತೆ, ರಾಮಲಿಂಗಖಿಂಡ ಬೀದಿ, ಮೇಮುಕಲಾನಿ ಚೌಕ್, ತಹಶೀಲ್ದಾರಗಲ್ಲಿ ಮಾರ್ಗವಾಗಿ ಬಾಂಧುರಗಲ್ಲಿ ಕಪಿಲೇಶ್ವರ ಮಂದಿರದ ಮೂಲಕ ಶಿವಾಜಿ ಉದ್ಯಾನದವರೆಗೆ ಮೆರವಣಿಗೆ ನಡೆಯಲಿದ್ದು, ಬೆಳಗ್ಗೆ ವೇಳೆ ಅಂತ್ಯಗೊಳ್ಳಲಿದೆ.
ಸಂಭಾಜಿ ವೃತ್ತದಲ್ಲಿ ಪ್ರೇಕ್ಷಕರಿಗಾಗಿ ಗ್ಯಾಲರಿಗಳನ್ನು ನಿರ್ಮಾಣ ಮಾಡಲಾಗಿತ್ತು. ಮೆರವಣಿಗೆ ಸಂಚರಿಸುವ ರಸ್ತೆಯ ಇಕ್ಕೆಲಗಳಲ್ಲಿ ಮಾಡಿದ್ದ ವಿದ್ಯುತ್ ಅಲಂಕಾರ ಮೆರವಣಿಗೆಯ ಭವ್ಯತೆಯನ್ನು ಇಮ್ಮಡಿಗೊಳಿಸಿತು. ಗೋವಾ, ಮಹಾರಾಷ್ಟ್ರ ರಾಜ್ಯಗಳಿಂದಲೂ ಸಾವಿರಾರು ಜನ ಅದ್ಧೂರಿ ಮೆರವಣಿಗೆ ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ನಗರದಾದ್ಯಂತ ಹಾಗೂ ವಿಶೇಷವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಒಟ್ಟಾರೆ 2500 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.