

ಉಡುಪಿ: ಬೆಳಾಗವಿಯಲ್ಲಿ ಎಂಇಎಸ್ ಗಲಾಟೆ ಮತ್ತು ಮಹಾರಾಷ್ಟ್ರದಲ್ಲಿ ಮೀಸಲಾತಿ ಹೋರಾಟದ ಬಗ್ಗೆ ನಿಗಾ ವಹಿಸಲಾಗಿದ್ದು, ಸರ್ಕಾರ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಗಡಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬುಧವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯನ್ನು ಕರ್ನಾಟಕದ ಎರಡನೇ ರಾಜಧಾನಿಯಾಗಿ ಬೆಳೆಸಲಾಗುವುದು. ಇದಕ್ಕೆ ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಸುವರ್ಣಸೌಧ, ವಿಮಾನ ನಿಲ್ದಾಣ ಎಲ್ಲವೂ ಇದೆ. ಜಿಲ್ಲೆಯ ವಿಸ್ತೀರ್ಣ ದೊಡ್ಡದಾಗಿದೆ. ಅತಿ ಹೆಚ್ಚು ಶಾಸಕರಿರುವ ಜಿಲ್ಲೆ ಬೆಳಗಾವಿ ಎಂದರು.
ಗೃಹಲಕ್ಷಿ ಯೋಜನೆಗೆ ಹಣದ ಕೊರತೆ ಇಲ್ಲ. ಒಂದೆರಡು ದಿನ ವಿಳಂಬ ಆಗಬಹುದು. ಪ್ರತಿ ತಿಂಗಳು ಖಾತೆಗೆ ಹಣ ಹಾಕುವ ಸಂದರ್ಭದಲ್ಲಿ ಸ್ವಲ್ಪ ವ್ಯತ್ಯಾಸ ಆಗಬಹುದು. 1.8 ಕೋಟಿ ಮಹಿಳೆಯರಿಗೆ ಖಂಡಿತವಾಗಿ ಹಣ ತಲುಪುತ್ತಿದೆ. ಪ್ರತಿ ತಿಂಗಳು ಸುಮಾರು 2.5 ಸಾವಿರ ಕೋಟಿ ಸಂದಾಯ ಆಗುತ್ತಿದೆ. ಇನ್ನು ಆರೇಳು ಲಕ್ಷ ಜನ ಉಳಿದುಕೊಂಡಿದ್ದು, ಅವರಲ್ಲಿ ಎರಡು ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಮನೆಗೆ ಹೋಗಿ ತಿಳುವಳಿಕೆ ನೀಡಿ ಸೇರ್ಪಡೆಗೊಳಿಸುತ್ತಾರೆ. ಬ್ಯಾಂಕ್ ಅಕೌಂಟ್ ಸಮಸ್ಯೆ ಇದ್ದರೆ ಅಂಚೆ ಕಚೇರಿಯಲ್ಲಿ ಖಾತೆ ತೆರೆಯುತ್ತೇವೆೆ ಎಂದರು.
ಶಾಲಾ ಮಕ್ಕಳಿಗೆ ಮೊಟ್ಟೆ ನೆಡುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ರಾಜ್ಯಾದ್ಯಂತ ಟೆಂಡರ್ ಆಗಿದೆ. ಆದಷ್ಟ್ಟು ಬೇಗ ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸಿ, ಮೊಟ್ಟೆ ನೀಡುವ ಕೆಲಸಕ್ಕೆ ಚಾಲನೆ ಕೊಡುತ್ತೇವೆ ಎಂದರು.
ಕೆಡಿಪಿ ಸಭೆ ಮುಂದೂಡಿಕೆ
ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆ ಕರೆಯುತ್ತಿಲ್ಲ ಎಂಬ ಬಿಜೆಪಿ ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಮಂಗಳವಾರ ಕೆಡಿಪಿ ಸಭೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಬಿಜೆಪಿ ಶಾಸಕರೇ ನಮಗೆ ಪುರುಸೋತ್ತಿಲ್ಲ ಎಂದು ಹೇಳಿದ್ದರಿಂದ ಮುಂದೂಡಿಕೆಯಾಗಿದೆ ಎಂದರು.