

ಬೆಳಗಾವಿ : ಇಲ್ಲಿನ ವಡಗಾವಿಯ ಪಾಟೀಲ ಗಲ್ಲಿಯ ಮಂಗಾಯಿ ದೇವಿ ದೇವಸ್ಥಾನದ ಜಾತ್ರೆ ಮೂರನೇ ದಿನವೂ ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಜರುಗಿತು. ಬೆಳಗ್ಗೆಯಿಂದಲೇ ಕುಟುಂಬ ಸಮೇತರಾಗಿ ಆಗಮಿಸಿದ ಭಕ್ತಸಾಗರ ಗ್ರಾಮದೇವತೆ ದರ್ಶನ ಪಡೆದರು.
ಪ್ರತಿವರ್ಷ ಐದು ದಿನಗಳಕಾಲ ಅತ್ಯಂತ ವೈಭವದಿಂದ ನಡೆಯುವ ಮಂಗಾಯಿ ದೇವಿ ಜಾತ್ರೆಯೂ ಮಂಗಳವಾರದಿಂದ ಆರಂಭಗೊಂಡಿದ್ದು, ಜಿಲ್ಲೆ ಮಾತ್ರವಲ್ಲದೇ,ರಾಜ್ಯದ ವಿವಿಧ ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಬಂದಿದ್ದ ಭಕ್ತರು, ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು.
ಮದುವೆ ಬಳಿಕ ಪರ ಜಿಲ್ಲೆಗಳಲ್ಲಿ ವಾಸವಾಗಿರುವ ಬೆಳಗಾವಿ ಜಿಲ್ಲೆಯ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಗೆ ಆಗಮಿಸುವುದು ಜಾತ್ರೆಯ ವಿಶೇಷವಾಗಿತ್ತು. ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತವರಿನ ದೇವಿಗೆ ಹರಕೆ ತೀರಿಸಿ ಶ್ರೇಯೋಭಿವೃದ್ಧಿಗೆ ಪ್ರಾರ್ಥಿಸಿದರು.
ಹಿಂದೂಗಳಷ್ಟೇ ಅಲ್ಲದೇ, ಜೈನ ಹಾಗೂ ಮುಸ್ಲಿಂ ಸೇರಿದಂತೆ ಸರ್ವಧರ್ಮೀಯರು ಜಾತ್ರೆಯಲ್ಲಿ ಪಾಲ್ಗೊಂಡು ಭಾವೈಕ್ಯತೆ ಮೆರೆದರು.
ಮಂಗಾಯಿ ದೇವಿಯನ್ನು ವಿವಿಧ ಭಗೆಯ ಹೂವುಗಳಿಂದ ಅಲಂಕರಿಸಿ, ವಿಶೇಷ ಪೂಜೆ ಹಾಗೂ ಅಭಿಷೇಕ ನೆರವೇರಿಸಲಾಯಿತು. ಬೆಳಿಗ್ಗೆಯಿಂದ ಸಂಜೆಯವರೆಗೂ ವಿವಿಧ ಕಾರ್ಯಕ್ರಮ ನೆರವೇರಿದವು.
ರಾಜ್ಯ ಹಾಗೂ ಹೊರರಾಜ್ಯಗಳಿಂದ ಜಾತ್ರೆಗೆ ಬಂದಿದ್ದ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗಿದ್ದು, ದೇವಸ್ಥಾನ ಸುತ್ತಲಿನ ಪರಿಸರದಲ್ಲಿರುವ ಅಂಗಡಿಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು. ಯುವಕ ಯುವತಿಯರು, ಮಹಿಳೆಯರು, ಮಕ್ಕಳು ಕೋಳಿ ಮರಿಗಳನ್ನು ದೇವಸ್ಥಾನದ ಮೇಲೆ ಹಾರಿಸಿ ಭಕ್ತಿ ಸಮರ್ಪಿಸಿದರೆ, ಜಾತ್ರೆಗೆ ಆಗಮಿಸಿದ್ದ ಸಂಪ್ರದಾಯದಂತೆ ಕುರಿ, ಆಡು, ಕೋಳಿಗಳನ್ನು ಅರ್ಪಿಸಲು ದೇವಸ್ಥಾನದ ಬಳಿ ಕೋಳಿ ಮತ್ತು ಕೋಳಿ ಮರಿಗಳ ವ್ಯಾಪಾರದಲ್ಲಿ ತೊಡಗಿದ್ದು ಕಂಡು ಬಂದಿತು. ದೇವಸ್ಥಾನದ ಆವರಣ ಸೇರಿದಂತೆ ಸುತ್ತಮುತ್ತಲೂ ಜನದಟ್ಟಣೆ ಹೆಚ್ಚಾಗಿದ್ದರಿಂದ ಮಹಿಳೆ ಮತ್ತು ವೃದ್ಧರು ಪರದಾಡಿದರು. ಬ್ಯಾರಿಕೇಡ್ ಹಾಕಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.