

ಬೆಳಗಾವಿ : ಜಮೀನುಗಳ 11-ಇ ನಕ್ಷೆ ಅವಧಿ ವಿಸ್ತರಿಸಿ ಕೊಡಲು ಲಂಚ ಸ್ವೀಕರಿಸುತ್ತಿದ್ದಾಗ ಚಿಕ್ಕೋಡಿಯ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸುಪರವೈಸರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಚಿಕ್ಕೋಡಿಯಲ್ಲಿ ಕಚೇರಿ ಸುಪರವೈಸರ್ ಸತೀಶ ಎಂ.ಕಲ್ಯಾಣಶೆಟ್ಟಿ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದ ಅಧಿಕಾರಿ. ನಿಪ್ಪಾಣಿ ತಾಲೂಕಿನ ಸೌಂದಲಗಾ ಗ್ರಾಮದ ಸಿದ್ಧಾರ್ಥ ಹಾಲಪ್ಪ ಪೂಜಾರಿಯವರ ಸೌಂದಲಗಾ ಮತ್ತು ಭೀವಸಿ ಗ್ರಾಮದ ಒಟ್ಟು 12 ಸರ್ವೇ ನಂಬರ್ ಗಳ 11 ಇ ನಕ್ಷೆ ಅವಧಿ ವಿಸ್ತರಿಸಿ ಕೊಡಲು ರೈತರಿಗೆ ಸತೀಶ ಕಲ್ಯಾಣಶೆಟ್ಟಿ ಅವರು ಆರು ಸಾವಿರ ರೂ.ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಬುಧವಾರ ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರಿನನ್ವಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಅನಿತಾ ಹದ್ದಣ್ಣವರ ಅವರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ, ಅಧಿಕಾರಿಯನ್ನು ಬಲೆಗೆ ಬೀಳಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.