

ಬೆಳಗಾವಿ: ಕಾನೂನು ಸಂಘರ್ಷಕ್ಕೆ ಒಳಗಾದ ಮಗುವಿನ ಸಮಸ್ಯೆಗಳನ್ನು ಆಲಿಸಿ, ಸೂಕ್ತ ರೀತಿಯ ಆಪ್ತ ಸಮಾಲೋಚನೆ ಒದಗಿಸಿ ತಿಳುವಳಿಕೆ ನೀಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮುರಳಿ ಮೋಹನ ರೆಡ್ಡಿ ಹೇಳಿದರು.
ಬೆಳಗಾವಿ ಜಿಲ್ಲೆ ಮಕ್ಕಳ ವಿಶೇಷ ಪೋಲಿಸ್ ಘಟಕ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಬೆಳಗಾವಿ ಪೊಲೀಸ್ ಸಭಾಗೃಹದಲ್ಲಿ ‘ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳಿಗೆ ಒಂದು ದಿನದ ಸಾಮರ್ಥ್ಯ ಅಭಿವೃದ್ದಿ ಮತ್ತು ಕಾನೂನು ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಘಟಕದಲ್ಲಿ ಪೋಲಿಸ್ ಅಧಿಕಾರಿಗಳ ಪಾತ್ರ ಬಿನ್ನವಾಗಿರುತ್ತದೆ. ಮಗುವಿನ ಆಪ್ತರಾಗಿ, ಹಿತೈಶಿಯಾಗಿ, ಭಾಷಾಂತಕಾರನಾಗಿ, ಆಪ್ತ ಸಮಾಲೋಚಕರಾಗಿ ನಾನಾ ರೀತಿಯಲ್ಲಿ ಮಗುವಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ತಾವು ಕಾರ್ಯ ನಿರ್ವಹಿಸಬೇಕು ಎಂದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸಿಸ್ಟರ್ ಲೂರ್ದ ಮೇರಿ ಜೆ. ಮಾತನಾಡಿ, ಅನಾಥ, ಏಕಪೋಷಕ, ಪರಿತ್ಯಕ್ತ ಮಕ್ಕಳು, ಬಾಲಕಾರ್ಮಿಕ, ವಿಶೇಷ ನ್ಯೂನ್ಯತೆ ಹೊಂದಿರುವ ಮಕ್ಕಳು, ಜೈಲು ಖೈದಿ ವಾಸಿ ಮಕ್ಕಳು, ಸಾಂಕ್ರಾಮಿಕ ರೋಗಗಳನ್ನು ಹೊಂದಿರುವ ಮಕ್ಕಳು ಸಮಿತಿಗೆ ಕಂಡುಬಂದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಾಗೂ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಿ, ಅಂತಹ ಮಕ್ಕಳಿಗೆ ಸಹಾಯ ಮಾಡೋಣ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ ಅವರು ಜಿಲ್ಲೆಯಲ್ಲಿರುವ ಮಕ್ಕಳಿಗೆ ಸಂಬಂಧಿಸಿದ ಮಕ್ಕಳ ಪಾಲನಾ ಸಂಸ್ಥೆಗಳು ಹಾಗೂ ಮಕ್ಕಳ ಸಹಾಯವಾಣಿ-1098ರ ಕುರಿತು ಮಾಹಿತಿ ನೀಡಿದರು.
ಡಾ ಸಂಜೀವ ಪಾಟೀಲ ಮಾತನಾಡಿದರು. ಪೊಲೀಸ್ ತರಬೇತಿ ಉಪನ್ಯಾಸಕ ಮಲ್ಲಪ್ಪ ಜಾಲಗಾರ ಮಕ್ಕಳ ನ್ಯಾಯ ಕಾಯ್ದೆ-2015, ನಿಯಮ 2016 ಪ್ರಕರಣಗಳ ನಿರ್ವಹಣೆ, ಬಾಲ ನ್ಯಾಯ ಮಂಡಳಿ ಕುರಿತು ಮಕ್ಕಳ ಕಲ್ಯಾಣ ಪೊಲೀಸರಿಗೆ ತರಬೇತಿ ನೀಡಿದರು. ವೀರೇಶ ದೊಡ್ಡಮನಿ ಸ್ವಾಗತಿಸಿದರು. ಮಲ್ಲಪ್ಪಾ ಕುಂದರಗಿ ನಿರೂಪಿಸಿದರು.