

| ರವಿ ಗೋಸಾವಿ ಬೆಳಗಾವಿ
ಸ್ಮಗ್ಲಿಂಗ್ ಚಿನ್ನ ಕಳ್ಳತನ ಪ್ರಕರಣದ ಆಂತರಿಕ ವಿಚಾರಣೆ ನಡೆಸಿರುವ ಸಿಐಡಿಯ ಡಿಟೆಕ್ಟಿವ್ ತಂಡ ಸಲ್ಲಿಸಿದ್ದ ಪ್ರಾಥಮಿಕ ವರದಿ ಆಧರಿಸಿ ಸಿಐಡಿ ಎಫ್ಐಆರ್ ದಾಖಲಿಸಿದೆ. ಪ್ರಕರಣದ ತನಿಖೆಯ ನೇತೃತ್ವವನ್ನು ಸಿಐಡಿ ಎಡಿಜಿಪಿ ಉಮೇಶಕುಮಾರ್ಗೆ ವಹಿಸಲಾಗಿದ್ದು, ಕಿಂಗ್ಪಿನ್ ಕಿರಣ್ ಸಹಚರ ‘ಖಾಕಿ’ಗಳಿಗೆ ನಡುಕ ಶುರುವಾಗಿದೆ.
ನಾನ್ಬೇಲಬಲ್ ಕೇಸ್: ಕೃತ್ಯ ಜರುಗಿದ್ದ ಯಮಕನಮರಡಿ ಪೊಲೀಸ್ ಠಾಣೆಯಲ್ಲಿಯೇ ಸಿಐಡಿ ಡಿಟೆಕ್ಟಿವ್ ಸಬ್ಇನ್ಸ್ಪೆಕ್ಟರ್ ಆನಂದ್, ಗೋಲ್ಡ್ ಮಾಲೀಕ ತಿಲಕ್ ಪೂಜಾರಿ ನೀಡಿದ್ದ ದೂರು ಅರ್ಜಿ ಸ್ವೀಕರಿಸಿದ್ದು, ಮಾಲೀಕರನ್ನೇ ದೂರುದಾರರನ್ನಾಗಿಸಿದ್ದಾರೆ. ಮಾ. 26ರಂದು ನಾನ್ಬೇಲಬಲ್ ಪ್ರಕರಣ ದಾಖಲಾಗಿದೆ. ತಿಲಕ್ ಜಿಪಿಗೆ ಸಲ್ಲಿಸಿದ್ದ ಪಿಟಿಷನ್ನಲ್ಲಿ ಆರೋಪಿಸಿರುವಂತೆ, ಕಾರಿನ ಏರ್ಬ್ಯಾಗ್ನಲ್ಲಿದ್ದ 4.90 ಕೆಜಿ ಹಳೇ ಬಂಗಾರದ ಗಟ್ಟಿಯನ್ನು ಕಳ್ಳತನ ಮಾಡಿರುವುದನ್ನು ಮಾತ್ರ ಉಲ್ಲೇಖಿಸಲಾಗಿದೆ. ಆದರೆ, ಯಾರನ್ನೂ ಆರೋಪಿಗಳನ್ನಾಗಿ ನಮೂದಿಸದಿರುವುದು ಕುತೂಹಲ ಮೂಡಿಸಿದೆ.
ಕಳ್ಳಾಟ ಬಯಲಿಗೆಳೆದ ಪದ ಬಳಕೆ: ಸಾಮಾನ್ಯವಾಗಿ ಹೈ ಪ್ರೊಫೈಲ್ ಅಪರಾಧಗಳ ಪತ್ತೆಗೆ ತಂತ್ರಜ್ಞಾನ ಬಳಸುವುದು ಹೆಚ್ಚು. ಆದರೆ, ಸ್ಮಗ್ಲಿಂಗ್ ಚಿನ್ನ ಕಳ್ಳತನದಲ್ಲಿ ಸುಳಿವು ನೀಡಿದ್ದು ಉತ್ತರ ಕರ್ನಾಟಕದ ಭಾಷೆ. ಚಿನ್ನದ ಮಾಲೀಕ ಮಂಗಳೂರಿನವರಾದರೂ ದೂರಿನ ಅರ್ಜಿಯಲ್ಲಿ ಉತ್ತರ ಕರ್ನಾಟಕ ಭಾಷೆ ಬಳಸಿರುವುದು ಕಿರಣ್ ಬಗ್ಗೆ ಶಂಕೆ ಮೂಡಿಸಿತ್ತು. ಅದರಲ್ಲೂ ಉತ್ತರ ಭಾರತದಲ್ಲಿ ಬಳಸುವ ‘ಡಕಾಯಿತಿ’ ಎಂಬ ಪದ ಬಳಸಲಾಗಿದ್ದು, ಸದ್ಯ ಆರೋಪ ಎದುರಿಸುತ್ತಿರುವ ಉನ್ನತ ಅಧಿಕಾರಿಯೇ ಈ ಪದ ಬರೆಸಿರಬಹುದು ಎಂಬ ಅನುಮಾನವನ್ನೂ ಹುಟ್ಟುಹಾಕಿತ್ತು. ಸಂಚಿನಂತೆ ಎಲ್ಲವೂ ನಡೆದಿದ್ದರೆ ಈಗಾಗಲೆ ಯಮಕನಮರಡಿಯ ಪಿಎಸ್ಐ, ಸಿಪಿಐ ಹಾಗೂ ಪೇದೆಗಳೇ ಪ್ರಮುಖ ಆರೋಪಿ ಸ್ಥಾನದಲ್ಲಿರುತ್ತಿದ್ದರು. ಆದರೆ, ದೂರು ಅರ್ಜಿಯಲ್ಲಿ ಬಳಸಿದ ಭಾಷೆ ಎಲ್ಲವನ್ನೂ ಬಯಲು ಮಾಡಿದೆ. ಹೀಗಾಗಿ ಉನ್ನತ ಅಧಿಕಾರಿ ತಾನೇ ಕಟ್ಟಿದ ಕತೆಯಿಂದಾಗಿ ಪ್ರಕರಣದ ಕಿಂಗ್ಪಿನ್ ಕಿರಣ್ ನಿರ್ದೇಶನದಲ್ಲಿ ಕಿರಿಯ ಅಧಿಕಾರಿಗಳನ್ನು ಪಾತ್ರಧಾರಿಯನ್ನಾಗಿಸಿ ಆಡಿದ ಕಳ್ಳಾಟ ಇದೀಗ ಅವರಿಗೇ ತಿರುಗುಬಾಣವಾಗಿದೆ.
ಫಿನಿಶ್ ಹಿಮ್ ಖ್ಯಾತಿ ಅಧಿಕಾರಿ
ತನಿಖೆಯ ನೇತೃತ್ವ ವಹಿಸಿರುವ ಉಮೇಶಕುಮಾರ್, 2015ರಲ್ಲಿ ಬೆಳಗಾವಿ ಉತ್ತರ ವಲಯದ ಐಜಿಪಿಯಾಗಿದ್ದರು. ಈ ವೇಳೆ ಯಾವುದೇ ಪ್ರಕರಣದ ಹೊಣೆಗಾರಿಕೆ ನೀಡುವ ತನಿಖಾಧಿಕಾರಿಗಳಿಗೆ ತಪ್ಪಿತಸ್ಥರನ್ನು ಬಂಧಿಸಿ ಎನ್ನುವ ಬದಲಾಗಿ ಅವರದ್ದೇ ಶೈಲಿಯಲ್ಲಿ ‘ಫಿನಿಶ್ ಹಿಮ್ ಎನ್ನುತ್ತಿದ್ದರು. ಅವರು ಹೇಗೆ ಈ ಪ್ರಕರಣವನ್ನು ‘ಫಿನಿಶ್’ ಮಾಡುತ್ತಾರೆ ಎಂಬ ಕುತೂಹಲ ಮೂಡಿದ್ದರೆ, ಅತ್ತ ತಪ್ಪಿತಸ್ಥರಲ್ಲಿ ಭಯ ಶುರುವಾಗಿದೆ.
*********