ಬೆಳಗಾವಿ ಎಂದೆಂದಿಗೂ ಕರ್ನಾಟಕದ್ದೇ

Ramesh-Web
Published on

ಬೆಳಗಾವಿ: ಬೆಳಗಾವಿ ಯಾವತ್ತಿದ್ದರೂ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ. ಸೂರ್ಯ-ಚಂದ್ರ ಇರುವವರೆಗೆ ಬೆಳಗಾವಿ ನಮ್ಮದೇ. ಕರ್ನಾಟಕದ ಒಂದಿಂಚು ಜಾಗವನ್ನೂ ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.

ಈ ವಿಚಾರವಾಗಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೆಳಗಾವಿ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರ ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಮಹಾಜನ್ ವರದಿಯನ್ನು ಈಗಾಗಲೇ ಒಪ್ಪಿಕೊಂಡಾಗಿದೆ. ಆದರೂ ಮಹಾರಾಷ್ಟ್ರ ಸರ್ಕಾರ ತನ್ನ ವೈಫಲ್ಯ ಮರೆಮಾಚಿಕೊಳ್ಳಲು ಆಗಾಗ ಗಡಿ ವಿಷಯ ಪ್ರಸ್ತಾಪಿಸಿ ಜನರ ಭಾವನೆ ಕೆರಳಿಸುವ ಪ್ರಯತ್ನ ಮಾಡುತ್ತಿದ್ದು, ಅದನ್ನು ನಿಲ್ಲಿಸಬೇಕು. ಅನಗತ್ಯವಾಗಿ ಮೂಗು ತೂರಿಸುವ ಚಾಳಿ ನಿಲ್ಲಬೇಕು ಎಂದು ಸಚಿವ ರಮೇಶ ಆಗ್ರಹಿಸಿದರು.

ಒಂದು ರಾಜ್ಯದ ಮುಖ್ಯಮಂತ್ರಿಯಾಗಿರುವ ಉದ್ಧವ್ ಠಾಕ್ರೆ ಅವರು ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು. ರಾಜಕೀಯ ಲಾಭಕ್ಕಾಗಿ ನ್ಯಾಯಾಲಯದಲ್ಲಿರುವ ಗಡಿ ವಿಷಯ ಪ್ರಸ್ತಾಪಿಸುತ್ತಿರುವ ಅವರ ನಡೆ ಸರಿಯಾದುದಲ್ಲ. ನೆಲ, ಜಲ ಮತ್ತು ಭಾಷೆಯ ರಕ್ಷಣೆಗೆ ಕಟಿಬದ್ಧರಾಗಿದ್ದೇವೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದರೆ ಪ್ರತ್ಯುತ್ತರ ನೀಡಲು ನಾವೂ ಸಿದ್ಧರಿದ್ದೇವೆ ಎಂದು ಸಚಿವ ರಮೇಶ ತಿರುಗೇಟು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net