

ಬೆಳಗಾವಿ: ಕೋವಿಡ್-19 ಲಸಿಕೆ ನೀಡಲು ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ವ್ಯಾಕ್ಸಿನ್ ಸಂಗ್ರಹಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಸಿಕೆ ಸಂಗ್ರಹಿಸಲು ಪ್ರತ್ಯೇಕ ಕೊಠಡಿ (ವಾಕ್ ಇನ್ ಕೂಲರ್, ವಾಕ್ ಇನ್ ಫ್ರೀಜರ್) ಸಿದ್ಧಗೊಳಿಸಲಾಗಿದ್ದು ಸ್ಟೋರೇಜ್ ಘಟಕಕ್ಕೆ ಪುಣೆ, ಹೈದರಾಬಾದ್, ಚೆನ್ನೈನಿಂದ ಲಸಿಕೆಗಳು ಬರಲಿವೆ. ಇಲ್ಲಿಂದ ಬೆಳಗಾವಿ ಸೇರಿ ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕಾರವಾರ ಹಾಗೂ ಕೊಪ್ಪಳ ಜಿಲ್ಲೆಗೆ
ಲಸಿಕೆ ಹಂಚಿಕೆಯಾಗಲಿವೆ.
ಲಸಿಕೆ ಹಂಚಿಕೆಗೆ ಎಲ್ಲ ರೀತಿ ಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ. ಲಸಿಕೆ ಬಂದ ತಕ್ಷಣ ನೀಡಲು ಬೆಳಗಾವಿ ಜಿಲ್ಲೆಯಲ್ಲಿ 180 ಡೀಪ್ ಫ್ರೀಜರ್ಸ್ ಮತ್ತು ಐಸ್‌ಲೈನ್ ರೆಫ್ರಿಜೆರೇಟರ್ (ಐಎಲ್‌ಆರ್) ಉಪಕರಣ ಅಣಿಗೊಳಿಸಲಾಗಿದೆ. ಅವುಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲಾಗಿದೆ. ಅವುಗಳಿಗೆ ಆರೋಗ್ಯಾಧಿಕಾರಿ ಕಚೇರಿಯಲ್ಲಿನ ಮುಖ್ಯ ಲಸಿಕೆ ಸಂಗ್ರಹ ಕೇಂದ್ರ ಹಾಗೂ ಜಿಲ್ಲಾಸ್ಪತ್ರೆಯ ಔಷಧ ಸಂಗ್ರಹ ಘಟಕದಿಂದ ಲಸಿಕೆ ಸರಬರಾಜಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮೊದಲ ಹಂತ 28.195 ಜನರಿಗೆ ಲಸಿಕೆ: ಮೊದಲ ಹಂತದಲ್ಲಿ ಜಿಲ್ಲೆಯ 195 ಸರ್ಕಾರಿ ಆಸ್ಪತ್ರೆಗಳು, 1,521 ಖಾಸಗಿ ಆಸ್ಪತ್ರೆಗಳ ವೈದ್ಯರು, ನರ್ಸ್‌ಗಳು ಸೇರಿ ಆರೋಗ್ಯ ಇಲಾಖೆಯ 28,195 ಸಿಬ್ಬಂದಿಗೆ ಲಸಿಕೆ ನೀಡಲು ಅಧಿಕಾರಿಗಳು ಅಣಿಯಾಗುತ್ತಿದ್ದಾರೆ. ಎರಡನೇ ಹಂತದಲ್ಲಿ ಪೊಲೀಸ್ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಸೇರಿ ಎರಡುವರೆ ಲಕ್ಷ ಜನರಿಗೆ ಲಸಿಕೆ ನೀಡಲಿದ್ದಾರೆ.
ಮೂರನೇ ಹಂತದಲ್ಲಿ ಸಮುದಾಯಕ್ಕೆ ನೀಡಲು ಯೋಜಿಸಿದ್ದಾರೆ. 50 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲು ತೀರ್ಮಾನಿಸಿದ್ದಾರೆ. ಮೂರು ಹಂತಗಳ ಲಸಿಕೆ ನೀಡುವುದಕ್ಕೆ ಹಂತಹಂತವಾಗಿ ಲಸಿಕೆಗಳು ಬರಲಿವೆ. ಮೊದಲ ಹಂತದ ಲಸಿಕೆಗಳು ಜನವರಿ 15ರ ವೇಳೆಗೆ ಬರಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 53 ಲಕ್ಷ ಜನರಿಗೆ ಲಸಿಕೆ ನೀಡುವುದಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರ ಮುಖ್ಯ ಲಸಿಕೆ ಸಂಗ್ರಹ ಕೇಂದ್ರ ಹೊರತುಪಡಿಸಿ ಜಿಲ್ಲೆಯಲ್ಲಿ 180 ಕೋಲ್ಡ್ ಚೈನ್ ಪಾಯಿಂಟ್‌ಗಳ ಮೂಲಕ ಲಸಿಕೆ ನೀಡುವ ಕಾರ್ಯ ನಡೆಯಲಿದೆ.
ಲಸಿಕೆ ಸಾಗಿಸುವಾಗ, ಸಂಗ್ರಹ ಕೊಠಡಿಯಲ್ಲಿ ತೇಖರಿಸಿಡುವಾಗ 2 ರಿಂದ 8 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಾಯ್ದುಕೊಳ್ಳಲಾಗುತ್ತದೆ. ಐಎಲ್‌ಆರ್ ಉಪಕರಣಗಳಲ್ಲಿ ಲಸಿಕೆ ಶೇಖರಿಸಿಡಲಾಗುತ್ತದೆ. ಎಲೆಕ್ಟ್ರಾನಿಕ್ ವ್ಯಾಕ್ಸಿನ್ ಇಂಟಲಿಜೆನ್ಸ್ ನೆಟ್‌ವರ್ಕ್ ಮೂಲಕ ಲಸಿಕೆಯನ್ನು 2-8 ಡಿಗ್ರಿ ತಾಪಮಾನದಲ್ಲಿ ಸುರಕ್ಷಿತವಾಗಿಡಲು ಕ್ರಮ ಕೈಗೊಳ್ಳಲಾಗುತ್ತದೆ. ಕೋಲ್ಡ್ ಚೈನ್ ಪಾಯಿಂಟ್ಸ್ ಜತೆಗೆ ಕೋಲ್ಡ್ ಬಾಕ್ಸ್‌ಗಳು ಇವೆ.
ಪಲ್ಸ್ ಪೋಲಿಯೋ ಲಸಿಕೆ ಕೊಂಡೊಯ್ಯುವ ಬಾಕ್ಸ್ ಮಾದರಿಯಲ್ಲಿ ವ್ಯಾಕ್ಸಿನ್ ಕ್ಯಾರಿಯರ್ ಸಿದ್ಧತೆ ಮಾಡಲಾಗಿದೆ. ಜತೆಗೆ ಒಂದು ಲಸಿಕಾ ವಾಹನ ಸಹ ಸಜ್ಜುಗೊಳಿಸಲಾಗಿದೆ. ಲಸಿಕೆ ಪೂರೈಕೆ ಮಾಡಿದ ನಂತರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು.| ಎಸ್.ವಿ.ಮುನ್ಯಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಬೆಳಗಾವಿ
| ಜಗದೀಶ ಹೊಂಬಳಿ ಬೆಳಗಾವಿ