ಬೆಳಗಾವಿ ಡಿಎಚ್‌ಒ ಕಾರ್ಯಾಲಯ ಕಟ್ಟಡಕ್ಕೆ ಅನಾರೋಗ್ಯ!

19-Jaggu-5.jpg
Published on

ಬೆಳಗಾವಿ: ಜಿಲ್ಲೆಯ ಜನರಿಗೆ ಆರೋಗ್ಯ ಸೇವೆ ನೀಡಬೇಕಾದ ‘ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ (ಡಿಎಚ್‌ಒ) ಕಟ್ಟಡಕ್ಕೆ’ ಅನಾರೋಗ್ಯ ಎದುರಾಗಿದೆ.
 ಹೌದು, ಟಿಳಕವಾಡಿ ವಾಕ್ಸಿನ್ ಡಿಪೋದಲ್ಲಿರುವ ಸುಮಾರು 100 ಪೂರೈಸಿದ ಹಳೇ ಕಟ್ಟಡದಲ್ಲಿ ಡಿಎಚ್‌ಒ ಕಾರ್ಯಾಲಯ ಕಾರ್ಯ ನಿರ್ವಹಿಸುತ್ತಿದ್ದು ಮಳೆಗೆ ಕಟ್ಟಡ ಸೋರುತ್ತಿದೆ. ಇಂತಹದರಲ್ಲಿಯೇ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕಟ್ಟಡ ಹಳೇಯದಾಗಿದ್ದರಿಂದ ಅಲ್ಲಲ್ಲಿ ಗೋಡೆಗಳು ಬಿರುಕು ಬಿಟ್ಟಿವೆ. ಹಂಚುಗಳು ಒಡೆದಿದ್ದು ಮಳೆಗೆ ಸೋರುತ್ತಿವೆ. ಮೀಟಿಂಗ್ ಹಾಲ್ ಅಂತೂ ಸಂಪೂರ್ಣ ಸೋರುತ್ತಿದೆ. ಕಟ್ಟಡದಲ್ಲಿರುವ ಕಟ್ಟಿಗೆಯ ಕಂಬಗಳು, ಕಿಟಕಿ, ಬಾಗಿಲುಗಳು ಗೆದ್ದಿಲು ತಿಂದು ಕೊಳೆಯುವ ಸ್ಥಿತಿಗೆ ತಲುಪಿವೆ. ಡಿಎಚ್‌ಒ ಕಚೇರಿಯು ಅಹ್ಲಾದಕರ ವಾತಾವರಣದಲ್ಲಿದೆ ಎನ್ನುವುದನ್ನು ಬಿಟ್ಟರೆ ಕಟ್ಟಡದ ಪರಿಸ್ಥಿತಿ ಈಗಲೋ ಆಗಲೋ ಬೀಳುವ ಸ್ಥಿತಿಗೆ ತಲುಪಿದೆ.
 ಈ ಕಟ್ಟಡದಲ್ಲಿ ಜಿಲ್ಲಾ ಲಸಿಕಾಧಿಕಾರಿ ಕಚೇರಿ, ವಿಶ್ವ ಆರೋಗ್ಯ ಸಂಸ್ಥೆಯ ಶಾಖಾ ಕಚೇರಿ, ಜಿಲ್ಲಾ ಸಮೀಕ್ಷೆಗಳ ಘಟಕ ಸೇರಿ ಮಹತ್ವದ ವಿಭಾಗಗಳು ಇದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆಯಾದರೂ ಕಟ್ಟಡ ಮಾತ್ರ ಬಳಸಲು ಯೋಗ್ಯವಾಗಿಲ್ಲ. 2005ರಿಂದಲೇ ಡಿಎಚ್‌ಒ ಕಾರ್ಯಾಲಯ ಈ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕಟ್ಟಡವನ್ನು ನವೀಕರಣವನ್ನಾದರೂ ಮಾಡಲಿ ಎಂದು ಇಲ್ಲಿಯ ಸಿಬ್ಬಂದಿ ಹೇಳುತ್ತಾರೆ. ಡಿಎಚ್‌ಒ ಕಚೇರಿಯ ಕಟ್ಟಡ ಹೆರಿಟೇಜ್ ಕಟ್ಟಡವಾಗಿದ್ದರಿಂದ ನೆಲಸಮ ಮಾಡಿ ಹೊಸ ಕಟ್ಟಡ ಕಟ್ಟುವುದಕ್ಕೆ ನಿಯಮದ ಪ್ರಕಾರ ಅವಕಾಶವಿಲ್ಲ. ಹೀಗಾಗಿ ಈ ಹಳೇ ಕಟ್ಟಡದ ಮೇಲ್ಛಾವಣಿ ನವೀಕರಣ ಮಾಡಿ ಸೋರದಂತೆ ಮಾಡಬೇಕು. ಗಿಟಕಿ, ಬಾಗಿಲು, ಕಂಬಗಳನ್ನು ನವೀಕರಿಸಿ, ಮೀಟಿಂಗ್ ಹಾಲ್, ಉತ್ತಮವಾದ ಕ್ಯಾಬಿನ್‌ಗಳ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳ ಬೇಡಿಕೆ ಇದೆ. ಡಿಎಚ್‌ಇ ಕಾರ್ಯಾಲಯದ ಕಟ್ಟಡವನ್ನು ಉತ್ತಮವಾಗಿ ನವೀಕರಣಕ್ಕೆ ಮಾಡುವುದಕ್ಕೆ ಸುಮಾರು 50 ಲಕ್ಷ ರೂ. ಅಗತ್ಯವಿದೆ. ಜಿಲ್ಲಾ ಆರೋಗ್ಯಾಧಿಕಾರಿ ಅವರು ಅನುದಾನಕ್ಕೆ ಈ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಈವರೆಗೆ ಸರ್ಕಾರದಿಂದ ಪ್ರತಿಕ್ರಿಯೆ ಬಂದಿಲ್ಲ. ಕಟ್ಟಡ ನವೀಕರಣಕ್ಕಾಗಿ ಹಣ ಬಿಡುಗಡೆಗೆ ಜಿಲ್ಲಾಡಳಿತಕ್ಕೂ ಅಧಿಕಾರಿಗಳು ತಿಳಿಸಿದ್ದಾರೆ.
 ಕಟ್ಟಡಕ್ಕೆ ಕಾಯಕಲ್ಪ ಯಾವಾಗ?:
 ಈಗಿರುವ ಡಿಎಚ್‌ಒ ಕಾರ್ಯಾಲಯದ ಕಟ್ಟಡವು ದೇಶದ ಸಿಡುಬು ರೋಗದ ಲಸಿಕಾ ಉತ್ಪಾದನಾ ಕೇಂದ್ರವಾಗಿತ್ತು. ಸಿಡುಬು ರೋಗ ನಿರ್ಮೂಲನೆಯಾದ ಬಳಿಕ ಆ್ಯಂಟಿ ರೇಬಿಸ್ ವ್ಯಾಕ್ಸಿನ್ ಉತ್ಪಾದನೆ ಆರಂಭವಾಯಿತು. ತಂತ್ರಜ್ಞಾನ ಬೆಳೆದಂತೆ ದೇಶದ ವಿವಿಧೆಡೆ ಈ ವ್ಯಾಕ್ಸಿನ್‌ಗಳ ಉತ್ಪಾದನೆ ಶುರುವಾದ ಬಳಿಕ ವ್ಯಾಕ್ಸಿನ್ ಡಿಪೋ ಮುಚ್ಚಲಾಯಿತು. ಇದಾದ ಬಳಿಕ 2005ರಲ್ಲಿ ಡಿಎಚ್‌ಒ ಕಚೇರಿಯನ್ನು ಈ ವಾಕ್ಸಿನ್ ಡಿಪೋಗೆ ಸ್ಥಳಾಂತರಿಸಲಾಯಿತು. ಅಂದಿನಿಂದ ಕಟ್ಟಡಕ್ಕೆ ಕಾಯಕಲ್ಪ ದೊರೆತಿಲ್ಲ.
 ಅಧಿಕಾರಿ ಪ್ರತಿಕ್ರಿಯೆ:
 ಡಿಎಚ್‌ಒ ಕಾರ್ಯಾಲಯದ ಕಟ್ಟಡ ನವೀಕರಣಕ್ಕೆ 25 ಲಕ್ಷ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಕಳೆದ ವರ್ಷ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿಲ್ಲ. ಅನುದಾನ ಬಿಡುಗಡೆಯಾದರೆ ಕಟ್ಟಡ ನವೀಕರಣ ಮಾಡುವುದಕ್ಕೆ ಅನಕೂಲವಾಗುತ್ತದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net