ಓದು ವಿಸ್ತಾರವಾದರೆ ಮೌಲ್ಯಯುತ ಕೃತಿ ರಚನೆ

6Ravig3
ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಾಗೇಶ ನಾಯಕ ಅವರ ‘ಕಾಡುವ ಕವಿತೆಗಳು’ ವಿಮರ್ಶಾ ಬರಹಗಳ ಕೃತಿಯನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು. ಎ.ಎ. ಸನದಿ, ಹಿರಿಯ ಸಾಹಿತಿ ಶಿರೀಷ ಜೋಶಿ, ಡಾ. ನಿರ್ಮಲಾ ಬಟ್ಟಲ, ನಾಗೇಶ ನಾಯಕ, ವಿಠ್ಠಲ ತಡಸಲನೂರ, ಆಶಾ ಯಮಕನಮರಡಿ ಇತರರಿದ್ದರು.
Published on

ಬೆಳಗಾವಿ: ಸಾಧನೆ ಎನ್ನುವುದು ಶ್ರಮದಿಂದಲೇ ಲಭಿಸುತ್ತದೆ ಹೊರತು ಅದಕ್ಕೆ ವಾಮಮಾರ್ಗಗಳಿಲ್ಲ. ಓದು ವಿಸ್ತಾರವಾಗಿ ಅಂತರಂಗ-ಬಹಿರಂಗ ಒಂದಾಗಿದ್ದರೆ ಮಾತ್ರ ಮೌಲ್ಯಯುತ ಕೃತಿಗಳು ಸೃಷ್ಟಿಯಾಗಬಲ್ಲವು ಎಂದು ಹಿರಿಯ ಸಾಹಿತಿ ಶಿರೀಷ ಜೋಶಿ ಅಭಿಪ್ರಾಯಪಟ್ಟರು.

ಇಲ್ಲಿನ ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ನಾಗೇಶ ನಾಯಕ ಅವರ ‘ಕಾಡುವ ಕವಿತೆಗಳು’ ವಿಮರ್ಶಾ ಬರಹಗಳ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿ, ಕಾಡುವ ಕವಿತೆಗಳನ್ನು ಹುಡುಕುವ ಮತ್ತು ಅದರ ಬಗ್ಗೆ ಬರೆಯುವುದು ಸಣ್ಣ ಕೆಲಸವಲ್ಲ. ನಾಗೇಶ ನಾಯಕ ಮಾಡಿರುವ ಕಾರ್ಯ ಸಾಹಿತ್ಯಿಕ ಮಹತ್ವ ಪಡೆಯುತ್ತದೆ ಎಂದರು.

ಕೃತಿ ಪರಿಚಯಿಸಿದ ಕವಯಿತ್ರಿ ಡಾ. ನಿರ್ಮಲಾ ಬಟ್ಟಲ, ಹಿರಿಯ ಕವಿಗಳಿಂದ ಹಿಡಿದು ಹೊಸ ತಲೆಮಾರಿನ ಕವಿಗಳ ಕವಿತೆ ವಿಮರ್ಶಿಸಿದ ಪರಿ ಗಮನಿಸಿದರೆ ನಾಗೇಶ ನಾಯಕರ ಓದಿನ ವ್ಯಾಪ್ತಿ ಬೆರಗು ಹುಟ್ಟಿಸುತ್ತದೆ. ಓದುಗರ ಮನಸು ಗೆಲ್ಲಲು ಹತ್ತಾರು ಕೃತಿಗಳನ್ನು ರಚಿಸಬೇಕಾಗಿಲ್ಲ. ಒಂದೇ ಒಂದು ಗಟ್ಟಿ ಕವಿತೆ ಅಥವಾ ಬರಹ ಕವಿಯೊಬ್ಬನನ್ನು ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡಬಹುದಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಎ.ಎ. ಸನದಿ ಮಾತನಾಡಿ, ಸಂಕಲನದಲ್ಲಿ ವಿಮರ್ಶಿಸಲ್ಪಟ್ಟ ಐವತ್ತೂ ಕವಿತೆಗಳು ಬೆರಗು ಹುಟ್ಟಿಸುವಂತಿವೆ. ನಾಗೇಶ ನಾಯಕ ಕಾಡುವ ಕವಿತೆಗಳ ವಿಮರ್ಶೆ ನಿಲ್ಲಿಸದೆ ಮುಂದುವರಿಸಬೇಕು ಎಂದರು.

ಕರ್ನಾಟಕ ಬಾಲವಿಕಾಸ ಅಕಾಡೆಮಿ ಪ್ರಶಸ್ತಿ ಪಡೆದ ಬಸವರಾಜ ಗಾರ್ಗಿ ಅವರನ್ನು ಸನ್ಮಾನಿಸಲಾಯಿತು. ಕೃತಿಕಾರ ನಾಗೇಶ ನಾಯಕ, ವಿಠ್ಠಲ ತಡಸಲನೂರ, ಬಸವರಾಜ ಗೌಡಪ್ಪ, ಮಲ್ಲಿಕಾರ್ಜುನ ಛಬ್ಬಿ, ನದೀಮ ಸನದಿ, ಸುನಂದ ಮುಳೆ, ಅಕ್ಬರ್ ಸನದಿ, ಸಿದ್ದಣ್ಣ ಕುರುಬರ, ಮದನ ಕಣಬೂರ, ಮಾಲಾ ಅಕ್ಕಿಶೆಟ್ಟಿ, ಪ್ರೊ.ಇಂದಿರಾ ಹೋಳ್ಕರ್ ಇತರರಿದ್ದರು. ಕವಯಿತ್ರಿ ಆಶಾ ಯಮಕನಮರಡಿ ನಿರೂಪಿಸಿದರು. ಆರ್.ಬಿ. ಬನಶಂಕರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net