ಬೆಳಗಾವಿಗೂ ಬಂದಿದೆ ಮದ್ರಾಸ್ ಐ

27Ravig4
Published on

ಬೆಳಗಾವಿ: ನಿರಂತರ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ಸುಮಾರು ಒಂದು ತಿಂಗಳಿನಿಂದ ಬೆಳಗಾವಿ ಜನರ ಕಣ್ಣಿಗೆ ಸೂರ್ಯನ ದರ್ಶನವೇ ಆಗಿಲ್ಲ. ಮಳೆ-ಗಾಳಿಯಿಂದಾಗಿ ಪಸರಿಸಿರುವ ತಂಪಿನ ಪರಿಣಾಮ ಚಳಿಗಾಲಕ್ಕೂ ಮುನ್ನವೇ ವೈರಾಣು ದಾಂಗುಡಿ ಇಟ್ಟಿದ್ದು, ಜನರ ಕಣ್ಣುಗಳಿಗೆ ನಂಜು ರಾಚುತ್ತಿದೆ.

ಒಂದು ತಿಂಗಳ ಅವಧಿವರೆಗೆ ಬಾಧಿಸುವ ಈ ನಂಜು ಸಾಮಾನ್ಯವಾಗಿ ತೇವಾಂಶ ಹೆಚ್ಚಾದಾಗ ಅಥವಾ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ, ಮಳೆಗಾಲದಲ್ಲಿಯೇ ಕಾಣಿಸಿಕೊಂಡಿವೆ. ಚಳಿಯ ವಾತಾವರಣವಿರುವುದರಿಂದ ಈ ವೈರಾಣುಗಳು ವ್ಯಾಪಕವಾಗಿ ಹರಡುತ್ತಿವೆ. ತಿಂಗಳು ಕಾಲ ಬಾಧಿಸುವ ಈ ನಂಜಿಗೆ ಮುನ್ನೆಚ್ಚರಿಕೆಯೇ ಮದ್ದಾಗಿದ್ದು, ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಜಾಗೃತಿ ಮೂಡಿಸುತ್ತಿದೆ.
ಬೆಳಗಾವಿ ನಗರವೂ ಸೇರಿ ಜಿಲ್ಲಾದ್ಯಂತ ಕೆಲವು ದಿನಗಳಿಂದ ಕಾಣಿಸಿಕೊಂಡಿರುವ ಕಂಜಕ್ಟಿವೈಟಿಸ್ ಅಥವಾ ಮದ್ರಾಸ್ ಐ ಎಂದು ಹೆಸರಿರುವ ಕಣ್ಣಿನ ನಂಜು ರೋಗದಿಂದ ಜನತೆ ಕಂಗಾಲಾಗಿದ್ದಾರೆ. ಶಾಲಾ-ಕಾಲೇಜು, ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ವೇಗವಾಗಿ ಹರಡುತ್ತಿದ್ದು, ಕಣ್ಣಿನ ಆಸ್ಪತ್ರೆಗಳಲ್ಲಿ ಜನರು ಸಾಲುಗಟ್ಟಿ ನಿಂತಿರುವುದು ಅಲ್ಲಲ್ಲಿ ಕಂಡುಬರುತ್ತಿದೆ. ಜಿಲ್ಲಾಸ್ಪತ್ರೆಯ ಕಣ್ಣಿನ ವಿಭಾಗದಲ್ಲಿ ಪರೀಕ್ಷಿಸಿಕೊಂಡವರಲ್ಲಿ ಒಂದು ವಾರದಲ್ಲಿ ಸಾವಿರಕ್ಕೂ ಅಧಿಕ ಜನರಲ್ಲಿ ಮದ್ರಾಸ್ ಐ ಕಂಡು ಬಂದಿವೆ. ಬೆಳಗಾವಿ ನಗರದಲ್ಲೇ ಪ್ರತಿನಿತ್ಯ 90ರಿಂದ 100 ಪ್ರಕರಣ ಪತ್ತೆಯಾಗುತ್ತಿವೆ.

ಲಕ್ಷಣಗಳೇನು?: ಸ್ಪರ್ಶದಿಂದ ಹರಡುವ ಈ ನಂಜು ನಿರ್ಲಕ್ಷಿಸಿದರೇ ಕಣ್ಣಿನ ಕಪ್ಪುಗುಡ್ಡೆ (ಕಾರ್ನಿಯಾ) ಹಾನಿ ಗೊಂಡು ಕುರುಡುತನವಾಗಬಹುದು ಎನ್ನಲಾಗಿದ್ದು, ಜನ ಆತಂಕಗೊಂಡಿದ್ದಾರೆ. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತ ನಾಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮಹೇಶ ಕೋಣಿ, ‘ಕಣ್ಣುಗಳು ಕೆಂಪಾಗುವುದು, ನೀರು ಬರುವುದು, ಕಣ್ಣುಗಳಲ್ಲಿ ಪಿಸುರು (ಪಿಚ್ಚು) ಗಟ್ಟುವುದು. ದೃಷ್ಟಿ ಕಡಿಮೆ ಆಗುವುದು, ಬಿಸಿಲಿಗೆ ಕಣ್ಣುಗಳು ಕುಕ್ಕುವುದು, ಕಣ್ಣುಗಳನ್ನು ಬಿಡಲು ಆಗದಿರುವುದು ರೋಗದ ಪ್ರಮುಖ ಲಕ್ಷಣಗಳಾಗಿವೆ.

ಹೇಗೆ ಹರಡುತ್ತೆ?: ಇದು ರೋಗಿಯ ಕಣ್ಣೀರಿನಲ್ಲಿ ಅಥವಾ ಪಿಸುರಿನಲ್ಲಿ ಈ ರೋಗಾಣು ಇರುವುದರಿಂದ ರೋಗಿಯು ಕೈಗಳು, ಟವಲ್, ಕರವಸ್ತ್ರಗಳಿಂದ ಒರಸಿಕೊಂಡು ಇಟ್ಟಾಗ ಅದನ್ನು ಮುಟ್ಟಿದ ಮತ್ತೊಬ್ಬರಿಗೆ ರೋಗ ಬರುತ್ತದೆ. ರೋಗಿಯು ತನ್ನ ಕೈಗಳಿಂದ ಕಣ್ಣನ್ನು ಮುಟ್ಟಿ ಅದೇ ಕೈಗಳಿಂದ ಟೇಬಲ್, ಕುರ್ಚಿಗಳು, ಟೀವಿ ರಿಮೋಟ್, ಕಿಟಕಿ, ಬಾಗಿಲು ಮುಟ್ಟುತ್ತಾರೆಯೋ ಅದೇ ವಸ್ತುಗಳನ್ನು ಆರೋಗ್ಯವಂತ ವ್ಯಕ್ತಿಗಳು ಮುಟ್ಟಿದಾಗ ಸೋಂಕು ಹರಡುತ್ತದೆ ಎಂದು ಡಾ.ಮಹೇಶ ಕೋಣಿ ಹೇಳಿದರು.

ಮಕ್ಕಳಲ್ಲೇ ಹೆಚ್ಚು!

‘ಮದ್ರಾಸ್ ಐ’ ಹಿರಿಯರಿಗಿಂತಲೂ ಮಕ್ಕಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಕಣ್ಣಿನ ಸಮಸ್ಯೆ ಇರುವ ಮಕ್ಕಳು ಶಾಲಾ-ಕಾಲೇಜುಗಳು ಹಾಗೂ ಹಾಸ್ಟೆಲ್‌ಗಳಿಗೆ ಹೋಗುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಒಟ್ಟಿಗೆ ಕೂರುವುದು, ಪೆನ್, ಪುಸ್ತಕಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುವುದರಿಂದ ವೈರಾಣುಗಳು ವ್ಯಾಪಕವಾಗಿ ಹರಡುತ್ತಿವೆ. ಮಕ್ಕಳಿಂದ ಪಾಲಕರಿಗೂ ಹರಡುತ್ತಿವೆ. ಹೀಗಾಗಿ ತಾಲೂಕು ಆರೋಗ್ಯ ಅಧಿಕಾರಿಗಳು ಎಲ್ಲ ಬಿಇಒಗಳಿಗೆ ಶಾಲೆಗಳಲ್ಲಿ ಈ ಬಗ್ಗೆ ಎಚ್ಚರ ವಹಿಸುವಂತೆ ಸೂಚನೆ ನೀಡುತ್ತಿದ್ದಾರೆ.

ಅಗತ್ಯ ಕ್ರಮಗಳೇನು?

ಈ ಮದ್ರಾಸ್ ಐ ಬಾಧಿಸದಂತೆ ತಡೆಗಟ್ಟಲು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ರೋಗಿಯು ಬಳಸಿದ ವಸ್ತುಗಳನ್ನು ಮುಟ್ಟಬಾರದು. ಪದೇ ಪದೆ ಕೈಗಳನ್ನು ಸ್ಯಾನಿಟೈಸರ್‌ನಿಂದ ತೊಳೆದುಕೊಳ್ಳಬೇಕು. ವೈರಸ್ ಕಾಣಿಸಿಕೊಂಡಾಗ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸಲಹೆ ಪಡೆಯಬೇಕು. ವೈದ್ಯರಿಂದ ತಪಾಸಣೆ ಮಾಡಿಸದೇ ಮೆಡಿಕಲ್ ಸ್ಟೋರ್‌ನಲ್ಲಿ ಸಿಗುವ ಡ್ರಾಪ್ಸ್‌ಗಳನ್ನು ಬಳಸಬಾರದು. ವೈದ್ಯರು ಸಲಹೆ ಮಾಡಿದ ಕಣ್ಣಿನ ಔಷಧಗಳನ್ನು ಬಳಸುವುದು ಸೂಕ್ತ. ಮದ್ರಾಸ್ ಐ ಇರುವವರು ಗಾಳಿಯಲ್ಲಿ ತಿರುಗಾಡಬಾರದು, ದ್ವಿಚಕ್ರ ವಾಹನ ಓಡಿಸಬಾರದು, ಕಣ್ಣಿಗೆ ವಿಶ್ರಾಂತಿ ಕೊಡಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಶಿವಾನಂದ ಮಾಸ್ತಿಹೊಳಿ ಹೇಳಿದರು.

ನಮ್ಮ ಮಗನಿಗೆ ಬಂದಿದ್ದರಿಂದ, ಆತನ ಸಂಪರ್ಕದಲ್ಲಿದ್ದರಿಂದ ನನಗೆ ಮತ್ತು ಪತ್ನಿಗೂ ಮದ್ರಾಸ್ ಐ ಬಾಧಿಸಿತ್ತು. ವೈರಲ್ ಇನ್ಪೆಕ್ಷನ್ ಇದಾಗಿದ್ದು, ಯಾವುದೇ ವಯಸ್ಸಿನವರಿಗೂ ಅಂಟುಕೊಳ್ಳಬಹುದು. ಆದರೆ, ತಜ್ಞ ವೈದ್ಯರ ಬಳಿ ತಪಾಸಿಸಿಕೊಂಡೇ ಔಷಧೋಪಚಾರ ಮಾಡಬೇಕು. ಭಯ ಪಡುವ ಅಗತ್ಯವಿಲ್ಲ, ನಾಲ್ಕೈದು ದಿನದಲ್ಲಿ ಗುಣಮುಖರಾಗಬಹುದು.| ಡಾ.ಮಹೇಶ ಕೋಣಿ, ಜಿಲ್ಲಾ ಆರೋಗ್ಯ ಅಧಿಕಾರಿ

| ರವಿ ಗೋಸಾವಿ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net