

ಬೆಳಗಾವಿ: ಪ್ರತಿ ಟನ್ ಕಬ್ಬಿಗೆ 3500ರೂ. ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರೈತರು ಆರಂಭಿಸಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ನಗರ ಹೊರವಲಯದ ಸುವರ್ಣ ವಿಧಾನಸೌಧ ಎದುರಿನಲ್ಲಿ ಪುಣೆ-ಬೆಂಗಳುರು ಹೆದ್ದಾರಿಯ ಮಧ್ಯೆ ಕುಳಿತು ಸಂಚಾರ ತಡೆದ ಕಾರ್ಯಕರ್ತರು, ಟೈರ್‌ಗೆ ಬೆಂಕಿಯಿಟ್ಟು ಆಕ್ರೋಶ ಹೊರಹಾಕಿದರು. ಹೊತ್ತಿ ಉರಿಯುತ್ತಿದ್ದ ಟೈರ್ ತೆರವುಗೊಳಿಸಲು ಮುಂದಾದ ಕರವೇ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ಕೆಲಹೊತ್ತು ವಾಗ್ವಾದ ನಡೆಯಿತು.
ಕೊನೆಗೆ ಸಂಚಾರ ತಡೆ ವಾಪಸ್ಸು ಪಡೆದುಕೊಳ್ಳುವಂತೆ ಪೊಲೀಸರು ಮನವೋಲಿಸಲು ಯತ್ನಿಸಿದರೂ ಕಾರ್ಯಕರ್ತರು ಹಿಂದೆ ಸರಿಯಲಿಲ್ಲ. ಈ ಹಿನ್ನೆಲೆಯಲ್ಲಿ ಕೊನೆಯೆ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು, ಬಳಿಕ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು.
ರಾಜ್ಯ ಸಂಚಾಲಕ ಸುರೇಶ ಗವನ್ನವರ, ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಗಣೇಶ ರೋಕಡೆ, ದತ್ತು ಹಕ್ಕ್ಯಾಗೋಳ, ವಿಠ್ಠಲ ಹಿಂಡಲಕರ, ಮಧು ಇಟಗಿ, ಸುರೇಶ ಗುಡದವರ, ಬಸವರಾಜ ಕುಲಾರಕೊಪ್ಪ ಇತರರಿದ್ದರು.