ಮತ್ತೊಂದು ಲೋಕಸಭೆ ಚುನಾವಣೆ

web 2
Published on

ಕಡೂರು: ಪಕ್ಷದ ಕಾರ್ಯಕರ್ತರು ಗ್ರಾಪಂ ಚುನಾವಣೆಯನ್ನು ಮತ್ತೊಂದು ಲೋಕಸಭಾ ಚುನಾವಣೆ ಎಂದು ಭಾವಿಸಬೇಕು. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದಂತೆ ಈ ಚುನಾವಣೆಯಲ್ಲೂ ಕೆಲಸ ಮಾಡಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಪಟ್ಟಣದ ತರಳಬಾಳು ಕಲ್ಯಾಣ ಮಂದಿರದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಮಾತನಾಡಿದರು.

ಚುನಾವಣೆ ಎಂದರೆ ಬಿಜೆಪಿಗೆ ಗೆಲುವು ನಿಶ್ಚಿತ ಎಂಬ ಭಾವನೆ ಜನರಲ್ಲಿ ಮೂಡಿದೆ. ಆ ಭಾವನೆ ಇನ್ನಷ್ಟು ಸದೃಢ ಮಾಡುವ ಕಾರ್ಯ ನಮ್ಮ ಜವಾಬ್ದಾರಿ. ಪಕ್ಷದ ಬೆನ್ನೆಲುಬಾದ ಕಾರ್ಯಕರ್ತರಿಂದ ಪಕ್ಷದ ಅಡಿಪಾಯ ಕಟ್ಟಬೇಕಿದೆ. ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ರಾಷ್ಟ್ರಭಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತತ್ವ ಆದರ್ಶಗಳನ್ನು ಮತ್ತು ಅವರು ಜಾರಿಗೊಳಿಸಿರುವ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಬೆಂಬಲಿತರು ಗೆದ್ದರೆ ಪಕ್ಷಕ್ಕೆ ಬಲ: ಪಕ್ಷದ ಚಿಹ್ನೆ ಇಲ್ಲದೆ ನಡೆಯಲಿರುವ ಗ್ರಾಪಂ ಚುನಾವಣೆಯಲ್ಲಿ ಬೆಂಬಲಿತರನ್ನು ಗೆಲ್ಲಿಸಿಕೊಂಡು ಪಕ್ಷದ ಅಡಿಪಾಯ ಸುಭದ್ರವಾಗಿಸಿಕೊಳ್ಳಬೇಕು. ಅದಕ್ಕಾಗಿ ಕಾರ್ಯಕರ್ತರು ಹೆಚ್ಚಿನ ಶ್ರಮವಹಿಸಿ ಜನರ ಬಳಿ ಹೋಗಿ ಕುಂದುಕೊರತೆ ಆಲಿಸುವ ಮೂಲಕ ಅವರ ಮನಸೆಳೆದರೆ ಮುಂಬರುವ ಚುನಾವಣೆಗಳಲ್ಲಿ ನಮ್ಮ ಗೆಲುವು ಸಾಧ್ಯ ಎಂದು ಸಚಿವ ಜೆ.ಸಿ.ಮಧುಸ್ವಾಮಿ ಹೇಳಿದರು.

ಜನರ ಹತ್ತಿರ ಸಂಬಂಧ ಬೆಳೆಸಲು ಚುನಾವಣೆ ಉತ್ತಮ ಅವಕಾಶ. ತಳ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲು ಗ್ರಾಪಂ ಚುನಾವಣೆ ಜಾತಿ, ಹಣ ಬಲ ಮೀರಿ ನಡೆಯಬೇಕಿದೆ. ಪ್ರತಿಸ್ಪರ್ಧಿಗಳು ನಮ್ಮ ನಮ್ಮಲ್ಲೇ ಪೈಪೋಟಿ ತರಬಾರದು. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಂಕಲ್ಪ ನಮ್ಮದಾಗಬೇಕಿದೆ ಎಂದರು.

ಗ್ರಾಪಂಗಳು ಸಮರ್ಪಕವಾಗಿ ಕೆಲಸ ಮಾಡಿದಾಗ ರಾಜ್ಯ ಸರ್ಕಾರದಿಂದ ಯಾರೂ ಏನನ್ನೂ ಕೇಳುವುದಿಲ್ಲ. ನಮ್ಮ ವ್ಯವಸ್ಥೆ ಸರಿಪಡಿಸಿಕೊಳ್ಳಬೇಕಿದೆ. ಗ್ರಾಪಂ ಚುನಾವಣೆಯಿಂದ ಮುಂದಿನ ತಾಪಂ, ಜಿಪಂ ಚುನಾವಣೆಗೆ ಅನುಕೂಲಕರ ವಾತಾವರಣ ಸೃಷ್ಟಿಸಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net