ಎರಡು ಬಾರಿ ಸಿಎಂ ಆಗಿದ್ದಕ್ಕೆ ಜಂಭ ಕೊಚ್ಚಿಕೊಳ್ಳುವುದಲ್ಲ: ಪರೋಕ್ಷವಾಗಿ ಸಿದ್ದರಾಮಯ್ಯಗೆ ತರಾಟೆ ತೆಗೆದುಕೊಂಡ ವಿಶ್ರಾಂತ ನ್ಯಾಯಮೂರ್ತಿ

19706.jpg
Published on

ಚಿಕ್ಕಬಳ್ಳಾಪುರ: ಎರಡು ಬಾರಿ ಸಿಎಂ ಆಗಿ ಕೆಲಸ ಮಾಡುತ್ತಿರುವುದರ ಬಗ್ಗೆ ಜಂಭ ಕೊಚ್ಚಿಕೊಳ್ಳುವುದಲ್ಲ. ಜನಪರ ಪರವಾಗಿ ಆಡಳಿತ ನಡೆಸುವುದು ಮುಖ್ಯ ಎಂದು ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಕೈಗೊಂಡಿದ್ದ ಜಂಟಿ ಕ್ರಿಯಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ದೇವನಹಳ್ಳಿ ತಾಲೂಕಿನ ಚನ್ನರಾಯಣಪಟ್ಟಣದಲ್ಲಿ ರೈತರು ಭೂ ಸ್ವಾಧೀನ ವಿರೋಧಿಸಿ ಹೋರಾಡಿದಾಗ ಆದೇಶವನ್ನು ಹಿಂಪಡೆಯಲಾಯಿತು. ಆದರೆ, ಎರಡು ತಿಂಗಳಾದರೂ ಸರ್ಕಾರದ ಭರವಸೆಯಂತೆ ರದ್ದತಿಯ ಅಧಿಸೂಚನೆಯನ್ನು ಹೊರಡಿಸಲಿಲ್ಲ ಎಂದು ಕಿಡಿಕಾರಿದ್ದಾರೆ. 

*ಮಂತ್ರಿ, ಅಧಿಕಾರಿಗೂ ಲಂಚ
ಭೂ ಸ್ವಾಧೀನ ವಿಚಾರವಾಗಿ ಮಂತ್ರಿಗೆ ೫೦ ಲಕ್ಷ ರೂ, ಅಧಿಕಾರಿಗೆ ೧೦ ಲಕ್ಷ ರೂ ನೀಡಬೇಕು. ಬಂಡವಾಳಶಾಹಿಗಳನ್ನು ಕರೆದುಕೊಂಡು ಬರುತ್ತಿರುವ ಕೈಗಾರಿಕಾ ಸಚಿವರು ಏನು ಮಾಡುತ್ತಿದ್ದಾರೆ?. ಯಾರಿಗಾದರೂ ಕಂಪ್ಯೂಟರ್‌ ಅನ್ನ, ರಸ್ತೆ, ಮನೆ ಕೊಡುತ್ತದೆಯೇ? ಪ್ರಮುಖವಾಗಿ ವ್ಯವಸಾಯ ಬೇಡವೇ?. ಈಗಲಾದರೂ ಕೃಷಿ ಜಮೀನನ್ನು ರೈತರಿಂದ ಕಸಿದುಕೊಂಡು ಕಂಪನಿಗಳಿಗೆ ನೀಡುವ ನಾಯಕರನ್ನು, ವಿದೇಶಗಳಿಗೆ ತಿರುಗಾಡುವ, ಆಡಳಿತ ನಿರ್ವಹಣೆಗೆ ಐಷರಾಮಿ ಹಣ ಖರ್ಚು ಮಾಡುವ ಜನಪ್ರತಿನಿಧಿಗಳನ್ನು   ಜನರು ಪ್ರಶ್ನಿಸಬೇಕು. ವಿಮಾನ ಜೆಟ್‌ನಲ್ಲಿಯೇ ಪ್ರಧಾನಿ, ರಾಷ್ಟ್ರಪತಿಗಳು ತಿರುಗಾಡಬೇಕು?. ಇದರ ದುಬಾರಿ ವೆಚ್ಚದ ಹಣವನ್ನು ಜನರ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಏಕೆ ಬಳಸಬಾರದು ಎಂದು ಗೋಪಾಲಗೌಡ ಪ್ರಶ್ನಿಸಿದ್ದಾರೆ.

*ರಾಜಭವನ ಏಜೆಂಟ್‌ ಕೇಂದ್ರಗಳು
ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟ್‌ ಗಳಾಗಿದ್ದು ರಾಜಭವನಗಳು ರಾಜಕೀಯ ನಾಯಕರ ಕೇಂದ್ರಗಳಾಗಿವೆ. ಹಿಂದೆ ಸರ್ಕಾರದ ಪರವಾಗಿ ತೀರ್ಪು ನೀಡಿದವರನ್ನು ರಾಜ್ಯಪಾಲರನ್ನಾಗಿ ನೇಮಿಸಲಾಗುತ್ತಿದೆ. ಇದು ಸಂವಿಧಾನ ಬದ್ಧವಾಗಿ ಆಡಳಿತ ನಡೆಸುವ ಒಳ್ಳೆಯ ರೀತಿಯಲ್ಲ. ದೇಶದಲ್ಲಿ ಭ್ರಷ್ಟಾಚಾರವು ತುಂಬಿ ತುಳುಕಾಡುತ್ತಿದೆ ಎಂದು ಗೋಪಾಲಗೌಡ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net