ಹಿಂದು ಧರ್ಮೀಯರಾಗಿ ಹುಟ್ಟಿರುವುದೇ ಭಾಗ್ಯ

Gouda saraswata
Published on

ಹುಬ್ಬಳ್ಳಿ: ಸಂಸ್ಕೃತಿ, ಪರಂಪರೆ, ಆಚರಣೆಯಲ್ಲಿ ಹಿಂದು ಧರ್ಮದಲ್ಲಿ ಇರುವಷ್ಟು ವೈವಿಧ್ಯತೆ ಬೇರೆ ಯಾವ ಧರ್ಮದಲ್ಲಿ ಇಲ್ಲ. ನಾವೆಲ್ಲ ಹಿಂದು ಧರ್ಮೀಯರಾಗಿ ಹುಟ್ಟಿರುವುದೇ ದೊಡ್ಡ ಭಾಗ್ಯ ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ನುಡಿದರು.

ಹುಬ್ಬಳ್ಳಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ವಿನಂತಿಯ ಮೇರೆಗೆ ಸೋಮವಾರ ಸಂಜೆ ನಗರಕ್ಕೆ ಆಗಮಿಸಿದ ಶ್ರೀಗಳು, ಇಲ್ಲಿಯ ಸರಸ್ವತಿ ಸದನದಲ್ಲಿ ಸಮಾಜ ಬಾಂಧವರನ್ನು ಉದ್ದೇಶಿಸಿ ಅಶೀರ್ವಚನ ನೀಡಿದರು. ಸೂರ್ಯನು ಪಥ ಬದಲಿಸುವ ಮಕರ ಸಂಕ್ರಾಂತಿಯು ಪರ್ವ ಕಾಲವಾಗಿದೆ. ಉತ್ತರಾಯಣದ ಆರಂಭ ಎಲ್ಲ ಶುಭ ಕಾರ್ಯಗಳಿಗೆ ಸುಸಂದರ್ಭವಾಗಿದೆ. ಮರಣಶಯ್ಯೆಯಲ್ಲಿದ್ದ ಭೀಷ್ಮ ಪಿತಾಮಹ ಉತ್ತರಾಯಣದಲ್ಲಿಯೇ ಪ್ರಾಣತ್ಯಾಗ ಮಾಡಿದ್ದರು ಎಂದರು.

ಒಂದು ನಿರ್ದಿಷ್ಟ ದಿನ (ಜ. 14 ಅಥವಾ 15ರಂದು) ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಪೋಂಗಲ್, ಲೋರಿ, ಬೋಗಿ ಎಂಬಿತ್ಯಾದಿ ಹೆಸರಿನಲ್ಲಿ ಆಚರಿಸುವುದು ಸಂಕ್ರಾಂತಿಯ ವಿಶೇಷತೆಯಾಗಿದೆ. ಬೇರೆ ಯಾವ ಹಬ್ಬವನ್ನು ಹೀಗೆ ವಿಭಿನ್ನ ಹೆಸರಿನಲ್ಲಿ, ವೈವಿಧ್ಯತೆಯಿಂದ ಆಚರಿಸಲಾಗುವುದಿಲ್ಲ ಎಂದರು.

ಸಂಕ್ರಾಂತಿಯಂದು ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಮಕರ ರಾಶಿಯ ಅಧಿಪತಿ ಶನಿ. ಶನಿಯ ತಂದೆ ಸೂರ್ಯನಾದರೂ ಇಬ್ಬರ ನಡುವೆ ಮಿತೃತ್ವ ಇಲ್ಲ. ಆದರೂ, ಸೂರ್ಯ ಪ್ರತಿ ವರ್ಷ ಒಂದು ತಿಂಗಳು ಶನಿಯ ಮನೆ (ಮಕರ)ಯಲ್ಲಿ ವಾಸ್ತವ್ಯ ಮಾಡುತ್ತಾನೆ. ಮನಸ್ತಾಪವಿದ್ದರೂ ಶನಿಯೂ ಪುತ್ರನ ಜವಾಬ್ದಾರಿ ನಿಭಾಯಿಸಲು ಹಿಂಜರಿಯುವುದಿಲ್ಲ. ತನ್ನ ಮನೆಯಲ್ಲಿ ಇರಬೇಡ ಎಂದು ಹೇಳುವುದಿಲ್ಲ. ಕುಟುಂಬದಲ್ಲಿ ಎಷ್ಟೇ ಮನಸ್ತಾಪವಿದ್ದರೂ ತಂದೆ-ಮಕ್ಕಳು ಒಂದಾಗಿ ಇರಬೇಕು ಎಂಬ ಸಂದೇಶವನ್ನು ಇದು ನೀಡುತ್ತದೆ ಎಂದು ಶ್ರೀಗಳು ವಿವರಿಸಿದರು.

ಸಮಾಜದ ಅಧ್ಯಕ್ಷ ರಮೇಶ ನಾಯಕ ದಂಪತಿ ಶ್ರೀಗಳ ಪಾದಪೂಜೆ ಮಾಡಿದರು. ವೇ.ಮೂ. ಪ್ರಥ್ವಿ ಭಟ್, ವಿಕ್ರಮ್ ಭಟ್ ಹಾಗೂ ಸಂತೋಷ ಭಟ್ ವೇಧ ಘೋಷ ಹಾಡಿದರು. ಸಮಾಜದ ಹಿರಿಯರಾದ ಆರ್.ಆರ್. ಕಾಮತ್, ಆರ್.ಎನ್. ನಾಯಕ, ವಿ.ಜಿ. ಪ್ರಭು, ಪವನ ಪ್ರಭು, ದಿನೇಶ ನಾಯಕ, ಪ್ರಮೋದ ಕಾಮತ್, ಇತರರು ಇದ್ದರು.

ಪೂರ್ಣಕುಂಭ ಸ್ವಾಗತ

ಜೆ.ಸಿ. ನಗರದ ಅಶೋಕಾ ಹೋಟೆಲ್‌ನಿಂದ ಸರಸ್ವತಿ ಸದನದವರಿಗೆ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ವಾದ್ಯ ವೃಂದ, ಛತ್ರ-ಛಾಮರಗಳು ಮೆರವಣಿಗೆಯಲ್ಲಿ ಇದ್ದವು. ಸುಮಂಗಲಿಯರು ಪೂರ್ಣಕುಂಭ ಸ್ವಾಗತ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net