ಕಾಂಗ್ರೆಸ್ ಕಾರ್ಯಕರ್ತ ಎಂಬುದೇ ನನಗಿರುವ ದೊಡ್ಡ ಜವಾಬ್ದಾರಿ

ex mlc ayanur manjunath join to congress
ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪ್ರಾಥಮಿಕ ಸದಸ್ಯತ್ವ ಪಡೆದರು. ಆರ್.ಪ್ರಸನ್ನಕುಮಾರ್, ಎಚ್.ಎಸ್.ಸುಂದರೇಶ್, ಆರ್.ಎಂ.ಮಂಜುನಾಥಗೌಡ, ಎಸ್.ಕೆ.ಮರಿಯಪ್ಪ, ಎಸ್.ಪಿ.ಶೇಷಾದ್ರಿ ಇದ್ದರು.
Published on

ಶಿವಮೊಗ್ಗ: ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಎಂಬುದೇ ಸದ್ಯಕ್ಕೆ ನನಗಿರುವ ದೊಡ್ಡ ಜವಾಬ್ದಾರಿ. ಮುಂದೆ ಯಾವ ಜವಾಬ್ದಾರಿ ನೀಡಬೇಕು ಎನ್ನುವುದನ್ನು ಪಕ್ಷವೇ ತೀರ್ಮಾನ ಮಾಡಲಿದೆ ಎಂದು ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ ತಿಳಿಸಿದರು.

ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದ ಬಳಿಕ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾವುದೇ ಷರತ್ತುಗಳಿಲ್ಲದೇ ಕಾಂಗ್ರೆಸ್ ಸೇರ್ಪಡೆ ಆಗಿದ್ದೇವೆ. ನನ್ನೊಂದಿಗೆ ಪ್ರಮುಖ 25 ಮಂದಿ ಸೇರಿದ್ದಾರೆ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಕೆಲಸವನ್ನು ಮಾಡುವುದು ನನ್ನ ಜವಾಬ್ದಾರಿ ಆಗಿದೆ ಎಂದರು.
ಹಳೇ ದಾರಿ ಹೊಸ ಪಯಣ ನನ್ನದು. ಇದು ಕೊನೆಯ ನಿಲ್ದಾಣವೆಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ದೇವರು ಕೊಟ್ಟಿರುವ ಅಲ್ಪಸ್ವಲ್ಪ ಶಕ್ತಿಯನ್ನು ಬಳಸಿಕೊಂಡು ಜಿಲ್ಲೆಯಲ್ಲಿ ರಾಜಕೀಯ ಬದಲಾವಣೆ ತರಲು ಪ್ರಯತ್ನಿಸುತ್ತೇನೆ. ಜಿಪಂ ಚುನಾವಣೆಯಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲಿ ಶ್ರಮ ಹಾಕಲಾಗುವುದು ಎಂದು ಹೇಳಿದರು.
ಜತೆಗೆ ಸರ್ಕಾರದ ಗ್ಯಾರಂಟಿ ಸೇರಿ ಹತ್ತು ಹಲವು ಯೋಜನೆಗಳನ್ನು ತಳಮಟ್ಟದವರೆಗೆ ಮುಟ್ಟಿಸುವತ್ತ ಗಮನ ಹರಿಸಲಾಗುವುದು. ವಿಶೇಷವಾಗಿ ಕಾರ್ಮಿಕರು, ಶೋಷಿತರ ಧ್ವನಿಯಾಗಿ ಕೆಲಸವನ್ನು ಮುಂದುವರಿಸುತ್ತೇನೆ. ಎಲ್ಲ ವರ್ಗದ ನೌಕರರ ಹಿತ ಕಾಯಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು. ಶಿವಮೊಗ್ಗದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಜನರಿಗೆ ನೆಮ್ಮದಿ ಸಿಗಬೇಕು. ಹಗುರವಾಗಿ ಮಾತನಾಡುವವರ ಬಾಯಿಗೆ ಬೀಗ ಹಾಕಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಸೇರ್ಪಡೆಗೆ ಕೆಪಿಸಿಸಿ ಸಂಯೋಜಕರೂ ಆದ ಎಚ್.ಸಿ.ಯೋಗೇಶ್ ಸೇರಿದಂತೆ ಪಾಲಿಕೆ ಸದಸ್ಯರು ವಿರೋಧ ವ್ಯಕ್ತಪಡಿಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಆಯನೂರು, ಈಗಷ್ಟೇ ಬಂದಿದ್ದೇನೆ. ಯೋಗೇಶ್ ಕೂಡ ನನ್ನ ಆತ್ಮೀಯ. ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗುತ್ತೇನೆ. ಸಣ್ಣ ಬಿರುಕು ಇದ್ದು ಅದನ್ನು ದೊಡ್ಡದು ಮಾಡುವುದಕ್ಕೆ ಹೋಗುವುದಿಲ್ಲ ಎಂದು ಜಾರಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net