

ಚಾಮರಾಜನಗರ: ರಾಜ್ಯದಲ್ಲೇ ‘ಕರೊನಾ ಮುಕ್ತ ಏಕೈಕ ಜಿಲ್ಲೆ’ಯಾಗಿ ಮುಂದುವರೆಯುತ್ತಿರುವ ಚಾಮರಾಜನಗರ ಲಾಕ್‌ಡೌನ್‌ನ ನಿಯಮಗಳು ಸಡಿಲಿಕೆಗೊಂಡರೂ ಜೂ.8ರಂದ ಜಾರಿಯಾಗಲಿರುವ ಅನ್‌ಲಾಕ್-1ನಿಂದ ಶುರುವಾಗಲಿರುವ ‘ಫ್ರೀಲೈಫ್’ ಜಿಲ್ಲೆಯ ಪಾಲಿಗೆ ಇದೀಗ ನೈಜ ಸವಾಲನ್ನು ತಂದೊಡ್ಡಿದೆ.
ಮಾ.23ರಿಂದ ಬಂದ್ ಆಗಿರುವ ದೇವಸ್ಥಾನಗಳು, ಹೋಟೆಲ್‌ಗಳು(ಪಾರ್ಸೆಲ್ ಮಾತ್ರ), ರೆಸ್ಟೋರೆಂಟ್‌ಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದಕ್ಕೂ ಮೊದಲು ಲಾಕ್‌ಡೌನ್ ಸಡಿಲಿಸಿ ಜಿಲ್ಲೆಯಿಂದ ಜಿಲ್ಲೆಗೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತ ಅವಕಾಶ, ಆರ್ಥಿಕತೆಯ ಚೇತರಿಕೆಯ ನಿಟ್ಟಿನಲ್ಲಿ ವ್ಯಾಪಾರ ವಹಿವಾಟಿಗೆ ಅನುಮತಿ ದೊರೆಯುತ್ತಿದ್ದಂತೆ ರಾಜ್ಯದಲ್ಲಿ ಕರೊನಾ ಸ್ಫೋಟವೂ ತೀವ್ರಗೊಳ್ಳಲಾರಂಭಿಸಿದೆ. ಇದು ಚಾಮರಾಜನಗರದಲ್ಲಿ ಸೋಂಕು ಪತ್ತೆಯಾಗದಿದ್ದರೂ ಜಿಲ್ಲೆ ಯಥಾಸ್ಥಿತಿಗೆ ಮರಳಿ ಇಂದಲ್ಲಾ ನಾಳೆ ವೈರಸ್ ಕಾಣಿಸಿಕೊಳ್ಳಬಹುದೆಂಬ ಆತಂಕಕ್ಕೆ ಪುಷ್ಟಿ ನೀಡಿದೆ. ಈ ಇದೀಗ ಜೂ.8ರಿಂದ ಜಾರಿಗೆ ಬರಲಿರುವ ಅನ್‌ಲಾಕ್-1 ಮುಂದಿನ ದಿನಗಳಲ್ಲಿ ಹಸಿರು ವಲಯ ಕೆಂಪಾಗಿ ಪರಿತರ್ವನೆಗೊಳ್ಳದಂತೆ ಪ್ರತಿಯೊಬ್ಬರ ಮೇಲೂ ಎಚ್ಚರವಹಿಸುವ ಕಾಲ ಸಮೀಪಿಸಿದೆ.
ಹೀಗಾದರೆ ಮುಂದೇನು ಗತಿ ?: ‘ಕರೊನಾ ಮುಕ್ತ ಜಿಲ್ಲೆ’ ಎನ್ನುವ ಹಮ್ಮಿನಲ್ಲಿ ಜನರು ಲಾಕ್‌ಡೌನ್‌ನ ನಿಯಮಗಳು ಸಡಿಲಿಕೆಗೊಂಡ ಬೆನ್ನಲ್ಲೇ ಸಾಮಾಜಿಕ ಅಂತರ ಮರೆತಿರುವುದು ಸುಳ್ಳಲ್ಲ. ಮಾರುಕಟ್ಟೆ, ಬಸ್ ನಿಲ್ದಾಣ, ವಾಣಿಜ್ಯ ಮಳಿಗೆಗಳು, ಟೀ ಅಂಗಡಿಗಳು ಸೇರಿ ಇತರೆಡೆಗಳಲ್ಲಿ ಕರೊನಾ ಹರಡದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಗಾಳಿಗೆ ತೂರಲಾಗಿದೆ.
ಕೆಲವರು ಮಾಸ್ಕ್ ಧರಿಸದೆ ರಸ್ತೆಗಳಲ್ಲಿ ಓಡಾಡುವ ಅಭ್ಯಾಸವನ್ನು ಮುಂದುವರೆಸಿದ್ದಾರೆ. ಕೆಲವರು ಮೂಗಿನ ಕೆಳಗೆ ಮಾಸ್ಕ್ ಹಾಕಿಕೊಂಡು ಕಾಟಾಚಾರದ ನಿಯಮ ಪಾಲನೆಗೂ ಮುಂದಾಗಿದ್ದಾರೆ. ಸಾರ್ವನಿಕ ಸ್ಥಳಗಳು, ಅಂಗಡಿ-ಮುಂಗಟ್ಟುಗಳಲ್ಲಿ ಸ್ಯಾನಿಟೈಸರ್ ಬಳಕೆಯನ್ನು ಮರೆಯಲಾಗುತ್ತಿದೆ. ಪ್ರತಿದಿನ ಮುಂಜಾನೆ ಚಹಾ ಅಂಗಡಿಗಳಲ್ಲಿ ಕಾಣಸಿಗುವ ಜನಜಂಗುಳಿಯನ್ನು ಗಮನಿಸಿದರೆ ಕರೊನಾ ತಡೆಗಟ್ಟುವ ನಿಯಮಗಳು ಎಷ್ಟರ ಮಟ್ಟಿಗೆ ಪಾಲನೆಯಾಗುತ್ತಿವೆ ಎನ್ನುವ ಬಗ್ಗೆ ಸ್ಪಷ್ಟತೆ ಸಿಗುತ್ತಿದೆ.
ಕೋವಿಡ್-19 ದೇಶದಲ್ಲಿ ಮೊದಲು ಕೇರಳದಲ್ಲಿ ಪತ್ತೆಯಾದಾಗ ರಾಜ್ಯದಲ್ಲಿ ಎಚ್ಚೆತ್ತುಕೊಂಡು ಮುಂಜಾಗ್ರತೆ ವಹಿಸಿದ ಜಿಲ್ಲೆ ಚಾಮರಾಜನಗರದಲ್ಲಿ ಪ್ರಾರಂಭದ ದಿನಗಳಲ್ಲಿ ನಿಯಮ ಪಾಲನೆ ಮಾಡುತ್ತಿದ್ದಷ್ಟು ಬದ್ಧತೆಯನ್ನು ಇಂದಿನ ದಿನಗಳಿಗೂ ಮುಂದುವರೆಸದಿದ್ದರೆ ಸಮಸ್ಯೆ ಎದುರಾಗಲಿದೆ.
ಜಿಲ್ಲಾಡಳಿತದ ಜವಾಬ್ದಾರಿ ಮಾತ್ರವಲ್ಲ: ಕರೊನಾ ಸೋಂಕು ತಡೆಗಟ್ಟುವುದು ಕೇವಲ ಅಧಿಕಾರಿಗಳ ಜವಾಬ್ದಾರಿ ಮಾತ್ರವಲ್ಲ. ಇದರಲ್ಲಿ ಜನರ ಸಹಕಾರವೂ ಮುಖ್ಯ. ಈ ನಿಟ್ಟಿನಲ್ಲಿ ಈವರೆಗೆ ಸಾರ್ವಜನಿಕರು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳಿಂದ ದೊರೆತಿರುವ ಸಹಕಾರ ಮತ್ತಷ್ಟು ಗಟ್ಟಿಗೊಳ್ಳಬೇಕಿದೆ. ಅನ್‌ಲಾಕ್-1 ಕರೊನಾ ನಿಯಂತ್ರಿಸುವ ಸಂಪೂರ್ಣ ಹೊಣೆಗಾರಿಕೆಯನ್ನು ಜನರಿಗೆ ಹೊರಿಸುತ್ತಿದೆ. ಈ ಹಂತದಲ್ಲಿ ಜಿಲ್ಲಾಡಳಿತ ಕರೊನಾ ಸೋಂಕು ತಗುಲದಂತೆ ಜಿಲ್ಲೆಯನ್ನು ಹೇಗೆ ಕಾಪಾಡಲಿದೆ ಎನ್ನುವ ಕುತೂಹಲದ ಜತೆ ಹೋಟೆಲ್, ದೇವಸ್ಥಾನಗಳು, ಸಾರ್ವಜನಿಕ ಸ್ಥಳಗಳಲ್ಲಿ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಎಷ್ಟರ ಮಟ್ಟಿಗೆ ಅನುಸರಿಸಬಹುದು ಎಂಬ ಪ್ರಶ್ನೆಯೂ ಕಾಡುತ್ತಿದೆ. ಕರೊನಾ ಮುಕ್ತ ಜಿಲ್ಲೆಯಾಗಿ ಕೀರ್ತಿ ಗಳಿಸಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರಿಂದ ಮೆಚ್ಚುಗೆ ಪಡೆದಿರುವ ಈ ಹೆಗ್ಗಳಿಕೆಯನ್ನು ಮುಂದಿನ ದಿನಗಳಲ್ಲೂ ಉಳಿಸಿಕೊಂಡು ಹೋಗಬೇಕಿದೆ.
ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಜೀವನದ ಭಾಗವಾಗಬೇಕು. ಇವೆಲ್ಲವೂ ಸಾಮಾಜಿಕ ಜವಾಬ್ದಾರಿಗಳಾಗಿ ಪರಿವರ್ತನೆಯಾಗಬೇಕು. ನಮ್ಮ ಜಿಲ್ಲೆಯಲ್ಲಿ ಜಾಗೃತ ಸಮುದಾಯವಿದೆ. ಯಾರೇ ಅಪರಿಚಿತರು ಬಂದರೂ ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತರುತ್ತಾರೆ. ಈ ಜಾಗೃತಿ, ಎಚ್ಚರ ನಿರಂತರವಾಗಿದ್ದರೆ ಸಮಸ್ಯೆಯಿಂದ ಕಾಪಾಡಲು ಸಾಧ್ಯವಾಗುತ್ತದೆ. ಇದನ್ನು ಅನುಸರಿಸಿದರೆ ಜಿಲ್ಲೆ ಹಸಿರಾಗಿ ಉಳಿಯಲಿದೆ.
ಡಾ.ಎಂ.ಆರ್.ರವಿ ಜಿಲ್ಲಾಧಿಕಾರಿ, ಚಾಮರಾಜನಗರ.