

ರಾಮನಗರ: ‘ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಲ್ಲಿ ನೀಡಿರುವ ಕಾಮಗಾರಿಯನ್ನು ಕೂಡಲೇ ಮುಗಿಸಿ, ಇಲ್ಲವೇ ಹಣ ವಾಪಸ್ ಕೊಡಿ, ಇಲ್ಲ ಕ್ರಮ ಎದುರಿಸಿ’ ಇದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್) ಅಧಿಕಾರಿಗಳಿಗೆ ರಾಮನಗರ ತಾಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜ್ ನೀಡಿದ ಎಚ್ಚರಿಕೆ.
ನಗರದ ಮಿನಿ ವಿಧಾನಸೌಧದ ತಾಪಂ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಗ್ರಾಮ ವಿಕಾಸ ಯೋಜನೆಯಲ್ಲಿ ಗ್ರಾಮಗಳಿಗೆ ಹಣ ಮಂಜೂರಾಗಿದ್ದು, ಅದನ್ನು ಕೆಆರ್‌ಐಡಿಎಲ್‌ಗೆ ವರ್ಗಾಯಿಸಲಾಗಿದೆ. ಆದರೆ 4 ವರ್ಷಗಳು ಕಳೆದರೂ ಕಾಮಗಾರಿಗಳು ಮಾತ್ರ ಪೂರ್ಣಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಹಾಜರಿದ್ದ ಕೆಆರ್‌ಐಡಿಎಲ್ ಇಂಜಿನಿಯರ್ ರಕ್ಷಿತಾ ಮಾತನಾಡಿ, ಈ ಹಿಂದೆ ಬೇರೋಬ್ಬರು ಕೆಲಸ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲ ಎಂದಾಗ ಆಕ್ರೋಶಗೊಂಡ ತಾಪಂ ಅಧ್ಯಕ್ಷ ನಟರಾಜ್ ಮತ್ತು ಇಒ ಶಿವಕುಮಾರ್, ನೀವು ವೈಯಕ್ತಿಕವಾಗಿ ಏನು ಮಾಡಿದ್ದಿರಿ ಎಂದು ಕೇಳುತ್ತಿಲ್ಲ, ನಾವು ಕೊಟ್ಟಿರುವ ಹಣಕ್ಕೆ ಸಂಬಂಧಿಸಿದಂತೆ ಪ್ರಗತಿ ಕೇಳುತ್ತಿದ್ದೇವೆ. ಕಾಮಗಾರಿ ಬೇಗ ಮುಗಿಸಲು ಸಾಧ್ಯವಾಗದಿದ್ದರೆ ತಿಳಿಸಿ, ನಾವು ಗ್ರಾಮ ಪಂಚಾಯಿತಿಯಿಂದ ಮಾಡಿಸುತ್ತೇವೆ ಎಂದರು. ಆಗ ಸೋಮವಾರದಿಂದ ಕಾಮಗಾರಿ ಪ್ರಗತಿ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲಾಗುವುದು ಎಂದು ಇಂಜಿನಿಯರ್ ಭರವಸೆ ನೀಡಿದರು.
ತಾಲೂಕು ವ್ಯಾಪ್ತಿಯ ಸ್ಮಶಾನಗಳಿಗೆ ಮಂಜೂರಾಗಿರುವ ಸ್ಥಳಗಳಿಗೆ ಕೂಡಲೇ ಗಡಿ ನಿಗದಿಪಡಿಸಬೇಕು. ಇದರಿಂದ ನರೇಗಾ ಸೇರಿ ಇತರ ಯೋಜನೆಯಲ್ಲಿ ಸ್ಮಶಾನಗಳ ಅಭಿವೃದ್ಧಿಗೆ ಕ್ರಮ ವಹಿಸಬಹುದು. ತಾಲೂಕಿನ ನಾಲ್ಕು ಕೆರೆಗಳು ಜಲಾಂದೋಲನ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು, ಈ ಕೆರೆಗಳ ಗಡಿ ಗುರುತಿಸುವ ಕೆಲಸವೂ ಆಗಬೇಕಿದೆ. ಆದರೆ ಕಂದಾಯ ಇಲಾಖೆ ಕೆಲಸದ ವಿಳಂಬದಿಂದ ತೊಂದರೆಯಾಗಿದೆ ಎಂದು ಉಪ ತಹಸೀಲ್ದಾರ್ ದಿನೇಶ್ ವಿರುದ್ಧ ನಟರಾಜ್ ಆಕ್ರೋಶ ವ್ಯಕ್ತಪಡಿಸಿದರು. ಮಾ.31ರೊಳಗೆ ಗಡಿ ಗುರುತಿಸುವುದಾಗಿ ತಹಸೀಲ್ದಾರ್ ಭರವಸೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ರಮಾಮಣಿ, ಸ್ಥಾಯಿ ಸಮಿತಿ ಅಧ್ಯಕ್ಷೆ ವರಲಕ್ಷ್ಮಿಮತ್ತಿತರರು ಇದ್ದರು.
ನೀರು ಒದಗಿಸಲು ಸೂಚನೆ: ತಾಲೂಕಿನ 20 ಗ್ರಾಪಂ ಪೈಕಿ 12 ಪಂಚಾಯಿತಿಗಳ ಸುಮಾರು 31 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೂಡಲೇ ಪಿಡಿಒಗಳು ಮತ್ತು ಜಿಪಂ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಶ್ರೀನಿವಾಸ್ ಕ್ರಮಕ್ಕೆ ಮುಂದಾಗಬೇಕು. ಶಾಲೆ, ಪಂಚಾಯಿತಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನೆಟ್ಟಿರುವ ಗಿಡಗಳಿಗೆ ನೀರೆರೆಯುವ ಮೂಲಕ ವಿಶೇಷವಾಗಿ ಸ್ವಚ್ಛ ಶುಕ್ರವಾರ ಕಾರ್ಯ ಮುಂದುವರಿಸಬೇಕು ಎಂದು ಅಧಿಕಾರಿಗಳಿಗೆ ಗಾಣಕಲ್ ನಟರಾಜು ಸೂಚಿಸಿದರು.
ರಾಮನಗರ ಬರಪೀಡಿತ ತಾಲೂಕು ಎಂದು ಘೋಷಣೆಯಾಗಿದೆ. ಟಾಸ್ಕ್‌ಪೋರ್ಸ್ ಅನುದಾನ ಬಳಸಿ ಸಮಸ್ಯೆ ಇರುವ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಅಧಿಕಾರಿಗಳು ಕ್ರಮವಹಿಸಬೇಕು. -ಶಿವಕುಮಾರ್, ಇಒ, ರಾಮನಗರ