ಬೇಡಿದ ವರವ ನೀಡುವ ಬೈಲಹೊಂಗಲ ಮರಡಿಬಸವೇಶ್ವರ

16BLH1
Published on

ಬೈಲಹೊಂಗಲ: ಈ ಭಾಗರ ಆರಾಧ್ಯದೈವ, ಬೇಡಿದ ವರವ ನೀಡುವ ಪಟ್ಟಣದ ಐತಿಹಾಸಿಕ ಮರಡಿಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನ.18ರಿಂದ ಅದ್ದೂರಿಯಾಗಿ ಆರಂಭಗೊಳ್ಳಲಿದೆ. ಜಾತ್ರೆ ಹಿನ್ನೆಲೆಯಲ್ಲಿ 22ರ ವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ಐತಿಹಾಸಿಕ ಹಿನ್ನೆಲೆ: 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ ಪ್ರಸ್ತಾಪಿಸಿದ ಅಂತರ್ಜಾತಿ ವಿವಾಹ ವಿಷಯವಾಗಿ ಬಿಜ್ಜಳ ಅರಸ ಸೈನಿಕರಿಗೆ ಬಸವಣ್ಣನ ಅನುಯಾಯಿಗಳನ್ನು ಗಡಿಪಾರು ಮಾಡಿ ಶಿಕ್ಷಿಸಲು ಆಜ್ಞೆ ನೀಡಿದಾಗ ಚನ್ನಬಸವಣ್ಣ ವಚನ ಭಂಡಾರ ಹೊತ್ತು 70 ಅನುಯಾಯಿಗಳೊಂದಿಗೆ ಉಳವಿಗೆ ತೆರಳುವಾಗ ಮರಡಿ ಬಸವೇಶ್ವರ ದೇವಸ್ಥಾನ ಇರುವ ಸ್ಥಳದಲ್ಲಿ ತಂಗಿ, ಪೂಜೆಗೈದ ಬಗ್ಗೆ ಉಲ್ಲೇಖಗಳಿವೆ. 50 ವರ್ಷಗಳ ಹಿಂದೆ ಮುರಗೋಡ ಮಹಾಂತ ಅಜ್ಜನ ಮಾತಿನಂತೆ ಬೃಹತ್ ದೇವಸ್ಥಾನ ನಿರ್ಮಿಸಲಾಗಿದ್ದು, ಎತ್ತರದ ಪ್ರದೇಶದಲ್ಲಿರುವುದರಿಂದ ಮರಡಿಬಸವೇಶ್ವರ ಹೆಸರು ಬಂದಿದೆ. ಈ ಭಾಗದ ಆರಾಧ್ಯ ದೇವರಾಗಿದ್ದಾರೆ. ಧಾರವಾಡದ ತಪೋವನದ ಕುಮಾರ ಸ್ವಾಮೀಜಿ ಇಲ್ಲಿ ವಿದ್ಯಾಭ್ಯಾಸ ಮಾಡಿ ಈ ದೇವರ ಭಕ್ತರಾಗಿದ್ದರೆಂದು ಹಿರಿಯರು ಹೇಳುತ್ತಾರೆ. ಸಂಗ್ಯಾ ಬಾಳ್ಯಾ ನಾಟಕದಲ್ಲೂ ದೇವಸ್ಥಾನದ ಜಾತ್ರೆಯ ವೈಭವ ವಿವರಿಸಲಾಗಿದೆ.

ಕಣ್ಮನ ಸೆಳೆಯುವ ರಥೋತ್ಸವ: 17ರಂದು ರುದ್ರಾಭಿಷೇಕ, ವಿಶೇಷ ಪೂಜಾ ಕಾರ‌್ಯಕ್ರಮ, ಉಚಿತ ಸಾಮೂಹಿಕ ವಿವಾಹ ನಂತರ ಮಹಾಪ್ರಸಾದವಿದೆ. 18ರಂದು ಜರುಗುವ ರಥೋತ್ಸವ ನಿಮಿತ್ತ ರಥ ಸಿಂಗಾರಗೊಂಡಿದೆ. ಪಟ್ಟಣದ ಜವಳಿ ಕೂಟದಿಂದ ಬಜಾರ ರಸ್ತೆಯ ಮೂಲಕ ಅತೀ ಎತ್ತರದ ಪ್ರದೇಶಕ್ಕೆ ಸುಮಾರು 50 ಅಡಿ ಎತ್ತರದ ರಥ ಎಳೆಯುವ ನೋಟ ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ಸೇರುತ್ತಾರೆ. ದೇವಸ್ಥಾನ ವಿದ್ಯುತ್ ದೀಪಾಲಂಕಾರಗೊಂಡಿದೆ. ಅರ್ಚಕರು ಪಲ್ಲಕ್ಕಿ ಉತ್ಸವ ನಡೆಸುತ್ತಾರೆ.

19, 20, 21ರಂದು ಮಧ್ಯಾಹ್ನ 3 ಗಂಟೆಗೆ ದೊಡ್ಡಕೆರೆಯ ಬಳಿ ವರ್ತಿಸಿದ್ದಬಸವೇಶ್ವರ ಬ್ಯಾಂಕ್, ಜಾತ್ರಾ ಕಮಿಟಿ, ಕ್ರೀಡಾ ಮತ್ತು ಕಲಾ ವೇದಿಕೆ ವತಿಯಿಂದ ಜರುಗುವ ಅಂತಾರಾಜ್ಯಮಟ್ಟದ ಪ್ರಸಿದ್ಧ ಪೈಲ್ವಾನರ ಕುಸ್ತಿ ಪಂದ್ಯಾವಳಿ, 21ರಂದು ರಾತ್ರಿ 10ಕ್ಕೆ ಇಂದಿರಾನಗರದ ಶಾಲೆಯಲ್ಲಿ ಕಲಿಯುಗದಲ್ಲಿ ಗರ್ಜಿಸಿದ ಕರ್ಣ, ಅರ್ಜುನ ನಾಟಕ ಪ್ರದರ್ಶನ ಜರುಗಲಿದೆ. 19, 20, 21ರಂದು ಬೃಹತ್ ಕೃಷಿಮೇಳ ಮತ್ತು ಜಾನುವಾರು ಪ್ರದರ್ಶನವು ಪಟ್ಟಣದ ಎಪಿಎಂಸಿ ಆವರಣದಲ್ಲಿ ಏರ್ಪಡಿಸಲಾಗಿದೆ. ಜಾತ್ರೆ ಯಶಸ್ಸಿಗೆ ಕಮಿಟಿ ಸದಸ್ಯರಾದ ಜಗದೀಶ ಕೊತಂಬ್ರಿ, ಸಣ್ಣಬಸಪ್ಪ ಕುಡಸೋಮಣ್ಣವರ, ಈಶ್ವರ ಕೊಪ್ಪದ, ರುದ್ರಪ್ಪ ತುರಮರಿ, ಮಹಾಂತೇಶ ಅಕ್ಕಿ, ಶಿವಪುತ್ರ ತಟವಾಟಿ, ರವಿ ಲಕ್ಕನ್ನವರ, ಶಿವನಿಂಗಪ್ಪ ಕೊತ್ತಂಬ್ರಿ, ಅಜ್ಜಪ್ಪ ಹೊಸೂರ ಸೇರಿ ನೂರಾರು ಭಕ್ತರು ಶ್ರಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net