

ಅಧಿಕಾರ ಗದ್ದುಗೆ ಏರಲು ರಾಜಕೀಯ ಪಕ್ಷಗಳು ಚುನಾವಣಾಪೂರ್ವ ಘೊಷಿಸಿದ ಅನೇಕ ಯೋಜನೆಗಳು ಅಭಿವೃದ್ಧಿಗೆ ದೊಡ್ಡ ಅಡ್ಡಿಯಾಗುತ್ತಿವೆ. ನಾ ಮುಂದು ತಾ ಮುಂದು ಎಂದು ಜನರಿಗೆ ಕೊಡುವ ಭರವಸೆಗಳು ಸರ್ಕಾರಗಳನ್ನು ಆರ್ಥಿಕ ಅಧಃಪತನದತ್ತ ತಳ್ಳುತ್ತಿವೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಖಾಸಗಿಯವರ ಕೈಸೇರುತ್ತಿವೆ. ಈ ಮಾತು ಬೇರೆಲ್ಲ ರಾಜ್ಯಗಳಿಗಿಂತ ಕರ್ನಾಟಕಕ್ಕೆ ಹೆಚ್ಚು ಅನ್ವರ್ಥವಾಗುತ್ತದೆ.
ಜನರ ನಿರೀಕ್ಷೆಗಳೂ ಹೆಚ್ಚು: ರಾಜಕೀಯ ಪಕ್ಷಗಳ ಓಲೈಕೆ ತಂತ್ರಗಾರಿಕೆಗಳಿಗಿಂತ ಜನರ ನಿರೀಕ್ಷೆಗಳೂ ದಿನೇದಿನೆ ಹೆಚ್ಚುತ್ತಿವೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಮಾಡಿದ ಸಾಲಮನ್ನಾ ಪ್ರತಿಪಕ್ಷಗಳಿಂದ ಅತಿ ಹೆಚ್ಚು ಟೀಕೆಗೆ ಒಳಗಾದ ಯೋಜನೆ. ರೈತರನ್ನು ಋಣಮುಕ್ತರನ್ನಾಗಿ ಮಾಡಲೇಬೇಕು ಎಂದು ಪಟ್ಟು ಬಿಡದೆ ಎಚ್ಡಿಕೆ ಯೋಜನೆ ಜಾರಿಗೊಳಿಸಿದ್ದು, ದೇಶದಲ್ಲೇ ಐತಿಹಾಸಿಕ ದಾಖಲೆ.
ಜತೆಗೆ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಬಿಪಿಎಲ್ ಕುಟುಂಬದ ಗರ್ಭಿಣಿಯರಿಗೆ 6 ತಿಂಗಳ ಕಾಲ ಪ್ರತಿ ಮಾಹೆಗೆ 6 ಸಾವಿರ ರೂ. ಕೊಡುವ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ನಿರುದ್ಯೋಗಿ ಯುವಕರ ಸ್ವಾವಲಂಬನೆಗೆ ಜಾರಿಗೊಳಿಸಿದ ‘ಐರಾವತ’, ಮೀಟರ್ ಬಡ್ಡಿ ದಂಧೆಗೆ ಸಿಲುಕುವುದನ್ನು ತಪ್ಪಿಸಲು ಬೀದಿ ಬದಿಯ ವ್ಯಾಪಾರಿಗಳಿಗೆ ನೆರವಾಗುವ ‘ಬಡವರ ಬಂಧು’ ಯೋಜನೆಗಳಿಗೆ ಈಗ ಒಂದೆಡೆ ರಾಜಕೀಯ ಇಚ್ಛಾಶಕ್ತಿಯ ಕೊರತೆ, ಮತ್ತೊಂದೆಡೆ ಆರ್ಥಿಕ ಸಂಕಷ್ಟ ಎದುರಾಗಿದೆ. ಇನ್ನು, ಕೃಷಿಗೆ ಹೊಸ ಕಸುವು ನೀಡಲು ರೂಪಿಸಿದ್ದ ‘ಇಸ್ರೇಲ್ ಮಾದರಿ ಕೃಷಿ ಪದ್ಧತಿ’ಯನ್ನು ಈ ಸರ್ಕಾರದಲ್ಲಿ ಕೇಳುವವರೇ ಇಲ್ಲ!
ಜನಪ್ರಿಯ ಯೋಜನೆಗಳಿಂದ ಬೊಕ್ಕಸ ಬರಿದಾಗಿದೆ. ಹೊಸ ಸರ್ಕಾರ ಬಂದರೂ ಉದಾರವಾಗಿ ನಾಲ್ಕಾರು ಹೊಸ ಯೋಜನೆಗಳನ್ನು ಪ್ರಕಟಿಸುವ ಸ್ಥಿತಿ ಇಲ್ಲದಾಗಿದೆ. ಕಾರಣ ಅಭಿವೃದ್ಧಿ ಯೋಜನೆಗಳು ಮರೀಚಿಕೆಯಾಗುತ್ತಿವೆ. ರೈತರ ಸಾಲಮನ್ನಾ ಎಫೆಕ್ಟ್ ಕುಮಾರಸ್ವಾಮಿ ಕಾಲದಲ್ಲೇ ಕಾಣಿಸಿಕೊಂಡಿತ್ತು. ಬಜೆಟ್ನಲ್ಲಿ ನೀರಾವರಿ ಯೋಜನೆಗಳಿಗೆ ಇಟ್ಟ ಹಣ ಬಿಡುಗಡೆಯಾಗದೆ ಯೋಜನೆಗಳು ನೀರಿಲ್ಲದೆ ಒಣಗಿದವು.
ತಮ್ಮ ಸರ್ಕಾರ ರೈತರ ಪರ ಎಂದು ತೋರಿಸಿಕೊಳ್ಳಲು ಇರುವ ಸುಲಭ ಮಾರ್ಗ ಹಾಲಿಗೆ ಪೋ›ತ್ಸಾಹ ಧನ ನೀಡುವುದು. ಹಾಲಿಗೆ ಪ್ರೋತ್ಸಾಹ ಧನ ನೀಡುವುದರಿಂದ ರಾಜ್ಯ ರಾಷ್ಟ್ರಮಟ್ಟದಲ್ಲಿ 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಕ್ಷೀರ ಕ್ರಾಂತಿಗೆ ಉತ್ತೇಜನ ದೊರೆತಿದೆ. ಹಾಲು ಉತ್ಪಾದನೆ ಹೆಚ್ಚಳದಿಂದ ಶಾಲಾ ಮಕ್ಕಳಿಗೂ ಕ್ಷೀರಭಾಗ್ಯ ಸಿಕ್ಕಿದೆ. ಮಕ್ಕಳ ಅಪೌಷ್ಟಿಕತೆಯ ಸಮಸ್ಯೆಗೆ ಸ್ವಲ್ಪ ಮಟ್ಟಿನ ಪರಿಹಾರ ದೊರೆತಿದೆ. ಈ ಕಾರಣಕ್ಕಾಗಿ ಹೊಸ ಸರ್ಕಾರ ಬಂದಾಗ, ಬಜೆಟ್ ಮಂಡಿಸಿದಾಗ ಕಳೆದ 5-6 ವರ್ಷಗಳಿಂದ ಹಾಲಿನ ಪೋ›ತ್ಸಾಹ ಧನ ಹೆಚ್ಚಿಸುತ್ತ ಬರಲಾಗಿದೆ. ಇದು ಬೊಕ್ಕಸಕ್ಕೆ ಸದ್ದಿಲ್ಲದೆ ಹೊಡೆತ ಕೊಡುತ್ತಿರುವುದೂ ಅಷ್ಟೇ ಸತ್ಯ.
ಹಸಿವು ನೀಗಿಸಲು ಜಾರಿಗೆ ತಂದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯಿಂದ ಬಡವರು ಎರಡು ಹೊತ್ತು ನೆಮ್ಮದಿಯಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ತಿನ್ನಲು ಅನ್ನ ಸಿಗದೆ ಗುಳೆ ಹೋಗುತ್ತಿದ್ದ ಕಾಲ ಈಗಿಲ್ಲ. ಆದರೆ, ಈ ಯೋಜನೆಗೆ ಕೇಂದ್ರ ಸರ್ಕಾರದ ನೆರವಿನ ಜತೆಗೆ ರಾಜ್ಯ ಸರ್ಕಾರ ವರ್ಷಕ್ಕೆ 3-4 ಸಾವಿರ ಕೋಟಿ ರೂ. ಮೀಸಲಿಡಬೇಕಾದ ಸ್ಥಿತಿಯಿದೆ. ಇವೆಲ್ಲದರ ಪರಿಣಾಮ ಅಭಿವೃದ್ಧಿ ಯೋಜನೆಗಳ ಜಾರಿಗೆ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಪ್ರವಾಹ ಪೀಡಿತ ಸಂತ್ರಸ್ಥರಿಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸಲು ಸರ್ಕಾರದಿಂದ ಸಾಧ್ಯವಾಗಿಲ್ಲ.
ಸಬ್ಸಿಡಿ ಯೋಜನೆ ಬಹಳ ಭಾರ
ಕೃಷಿ ಮತ್ತು ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಒಳಾಡಳಿತ ಮತ್ತು ಸಾರಿಗೆ, ಸಹಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಸತಿ, ಶಿಕ್ಷಣ, ವಾಣಿಜ್ಯ ಮತ್ತು ಕೈಗಾರಿಕೆ, ಕಾರ್ವಿುಕ, ಆಹಾರ, ಹಾಲು, ವಿದ್ಯುತ್ ಹಾಗೂ ಇತರ ಕ್ಷೇತ್ರಗಳ ಸಹಾಯಧನ ಯೋಜನೆಗಳು ಬೊಕ್ಕಸಕ್ಕೆ ಭಾರವಾಗಿವೆ.
ಸೋರಿಕೆ ತಡೆಗೆ ಶಿಫಾರಸು
ಫಲಾನುಭವಿ ನಿರ್ದೇಶಿತ ಯೋಜನೆ ಮತ್ತು ಸಹಾಯಧನಗಳ ಪೈಕಿ ಇಂಧನ, ವಸತಿ ಮತ್ತು ಆಹಾರ ಇಲಾಖೆಗಳು ಅತಿ ಹೆಚ್ಚಿನ ಸಹಾಯಧನದ ವಲಯಗಳಾಗಿವೆ. ಈ ಎಲ್ಲ ಯೋಜನೆಗಳ ಪ್ರಯೋ ಜನಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನೇರ ನಗದು ವರ್ಗಾವಣೆ ಯೋಜನೆಗಳನ್ನಾಗಿ ಮಾರ್ಪಡಿಸಿ, ಅದರ ಪ್ರಯೋಜನ ವನ್ನು ನೇರವಾಗಿ ಫಲಾನುಭವಿಗಳಿಗೆ ವರ್ಗಾಯಿಸಿದರೆ ಸೋರಿಕೆೆ ತಡೆಗಟ್ಟಬಹುದು ಎಂದು ಮಧ್ಯಮಾವಧಿ ವಿತ್ತೀಯ ವರದಿ ಸರ್ಕಾರಕ್ಕೆ ಸಲಹೆ ಮಾಡಿದೆ.
ಕೇಂದ್ರದ ನೆರವೂ ಅಷ್ಟಕ್ಕಷ್ಟೇ
ಕೇಂದ್ರದಿಂದ ಬರಬೇಕಾದ ಜಿಎಸ್ಟಿ ಪರಿಹಾರ, ಜಿಎಸ್ಟಿ ಪಾಲು, ಉದ್ಯೋಗ ಖಾತ್ರಿ ಯೋಜನೆಗಳ ಬಾಕಿ ಬಂದಿಲ್ಲ. ಜತೆಗೆ ಕೇಂದ್ರ ಪುರಸ್ಕೃತ ಅನೇಕ ಯೋಜನೆಗಳಿಗೆ ನೀಡುತ್ತಿದ್ದ ಆರ್ಥಿಕ ನೆರವೂ ಅರ್ಧಕರ್ಧ ಕಡಿಮೆಯಾಗಿದೆ. ಇನ್ನು ಕೆಲವು ಯೋಜನೆಗಳಿಗೆ ನೆರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಇದರಿಂದ ಜನರ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಕಡುಕಷ್ಟವಾಗಿದೆ.
ಸರ್ಕಾರ ಪಡೆದ ಸಾಲ
ರಾಜ್ಯ ಸರ್ಕಾರ 2017-18ರಲ್ಲಿ 25,121 ಕೋಟಿ ರೂ., 2018-19ರಲ್ಲಿ 43,731 ಕೋಟಿ ರೂ., 2019-20ರಲ್ಲಿ 46,127 ಕೋಟಿ ರೂ. ಸಾಲ ಪಡೆದಿದೆ. ಈ ಸಾಲದ ಪ್ರಮಾಣ ವಿತ್ತೀಯ ಮಿತಿಯಲ್ಲಿದ್ದರೂ ಹೊರೆಯಾಗುತ್ತಿರುವುದಂತೂ ಸತ್ಯ.
2. 6ನೇ ವೇತನ ಆಯೋಗದ ಕಾರಣದಿಂದ ಹೆಚ್ಚಿನ ರಾಜಸ್ವ ವೆಚ್ಚ.
3. ಸಹಾಯಧನಗಳ ಹೆಚ್ಚಳ ಮತ್ತು ನೇರ ಹಣ ವರ್ಗಾವಣೆಗಳು ಸೇರಿ ಗುರಿ ಆಧಾರಿತ ಸಹಾಯಧನಕ್ಕೆ ಒತ್ತು.
4. ಅನುದಾನವಿಲ್ಲದ ಅಥವಾ ಭಾಗಶಃ ಅನುದಾನದ ಬದ್ಧತೆಗಳನ್ನು ನಿರ್ವಹಿಸಬೇಕಾದ ಅವಶ್ಯಕತೆ. ಲೋಕೋಪಯೋಗಿ ಇಲಾಖೆ ಮತ್ತು ನೀರಾವರಿ ವಲಯಗಳಿಗೆ ಹೆಚ್ಚುವರಿ ಬಂಡವಾಳ ವೆಚ್ಚದ ಅಗತ್ಯತೆ ನಿಭಾವಣೆ.
5. ನಗರಾಭಿವೃದ್ಧಿ ವಲಯದಲ್ಲಿನ ಬೆಂಗಳೂರು ಮೆಟ್ರೋದಂಥ ಬೃಹತ್ ಬಂಡವಾಳ ವೆಚ್ಚ ಭರಿಸುವುದು.
ಆ ಭಾಗ್ಯ, ಈ ಭಾಗ್ಯಗಳಿಂದ ಕಟ್ಟಕಡೆಯ ಪ್ರಜೆಯವರೆಗೂ ಕೊಳ್ಳುವ ಸಾಮರ್ಥ್ಯ ಹೆಚ್ಚುತ್ತಿದೆ. ಆದರೆ, ಸರ್ಕಾರದ ತೆರಿಗೆ ಕ್ರೋಡೀಕರಣಕ್ಕೆ ಸಹಾಯವಾಗುತ್ತಿಲ್ಲ. ಸರ್ಕಾರ ಯೋಜನಾ ವೆಚ್ಚಗಳನ್ನು ಹೆಚ್ಚಿಸಲು ಕೆಳ ಹಂತದ ಪ್ರಜೆಗೂ ಕೊಳ್ಳುವ ಸಾಮರ್ಥ್ಯ ವೃದ್ಧಿಸಿ ಜಿಎಸ್ಟಿಯೇತರ ತೆರಿಗೆ ವ್ಯಾಪ್ತಿ ಹೆಚ್ಚಿಸಬೇಕು. ಹೆಚ್ಚು ಕೊಳ್ಳುವ ಸಾಮರ್ಥ್ಯ-ಹೆಚ್ಚು ತೆರಿಗೆ- ಹೆಚ್ಚು ಕ್ರೋಡೀಕರಣಗಳ ನಿಟ್ಟಿನಲ್ಲಿ ಬಜೆಟ್ ಗಮನಹರಿಸಬೇಕು. | ಆರ್.ಜಿ.ಮುರಳೀಧರ್ ತೆರಿಗೆ ಸಲಹೆಗಾರ, ಬೆಂಗಳೂರು
| ವಿಲಾಸ ಮೇಲಗಿರಿ ಬೆಂಗಳೂರು