ಬಿಯರ್ ಬಾಟಲಿಯಿಂದ ಸೇಲ್ಸ್‌ಮನ್‌ಗೆ ಚುಚ್ಚಲು ಯತ್ನ

bottle broken
Published on

ಶಿವಮೊಗ್ಗ: ನಗರದ ಹೊರವಲಯದ ಅಬ್ಬಲಗೆರೆಯ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಮದ್ಯ ಸೇವಿಸುತ್ತಿದ್ದ ವೇಳೆ ಪಕ್ಕದ ಟೇಬಲ್‌ನ ಯುವಕನೊಬ್ಬ ನೀರಿನ ಬಾಟಲಿ ಕೊಂಡೊಯ್ದು ಖಾಲಿ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಸೇಲ್ಸ್‌ಮನ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಿಯರ್ ಬಾಟಲಿ ಹೊಡೆದು ಚುಚ್ಚಲು ಯತ್ನಿಸಲಾಗಿದೆ.

ಜನ್ನಾಪುರ ಪುನೀತ್ ಮತ್ತು ಜೆಎನ್‌ಎನ್‌ಸಿಇ ಕಾಲೇಜು ಸಮೀಪದ ಅನಿಲ್ ಹಲ್ಲೆಗೆ ಯತ್ನಿಸಿದವರು. ಕುವೆಂಪುನಗರದ 34 ವರ್ಷದ ಸೇಲ್ಸ್‌ಮನ್, ತನ್ನ ಸ್ನೇಹಿತನ ಜತೆ ಅಬ್ಬಲಗೆರೆ ಬಾರ್‌ನಲ್ಲಿ ಮದ್ಯ ಸೇವಿಸುತ್ತಿದ್ದರು. ಈ ವೇಳೆ ಪುನೀತ್ ಮತ್ತು ಅನಿಲ್ ಪಕ್ಕದ ಟೇಬಲ್‌ಗೆ ಬಂದು ಕುಳಿತು ಮದ್ಯ ಸೇವಿಸಿದ್ದರು. ಸ್ವಲ್ಪಹೊತ್ತಿನ ಬಳಿಕ ಅದರಲ್ಲೊಬ್ಬ ವಾಂತಿ ಬರುವಂತಾಗಿದೆ ಎಂದು ಹೇಳಿ ಸೇಲ್ಸ್‌ಮನ್ ಟೇಬಲ್‌ನಲ್ಲಿದ್ದ ನೀರಿನ ಬಾಟಲಿ ಕೊಂಡೊಯ್ದಿದ್ದ.

ಹೊರಗಡೆ ಬಾಟಲಿ ಕೊಂಡೊಯ್ದು ನೀರು ಚೆಲ್ಲಿದ್ದ. ಈ ಬಗ್ಗೆ ಸೇಲ್ಸ್‌ಮನ್ ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಪಕ್ಕದಲ್ಲೇ ಇದ್ದ ಬಿಯರ್ ಬಾಟಲಿ ಹೊಡೆದು ಚುಚ್ಚಲು ಯತ್ನಿಸಿದ್ದಾರೆ. ಅಷ್ಟರಲ್ಲೇ ಆತ ಅಲ್ಲಿಂದ ಓಡಿಹೋಗಿದ್ದು ಆನಂತರ ಜತೆಗೆ ಬಂದಿದ್ದ ಆತನ ಸ್ನೇಹಿತನ ಮೇಲೆ ಹಲ್ಲೆ ಮಾಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net