ಮೈಸೂರಿನಲ್ಲಿ ಜೇನು ಕೃಷಿಕರ ಕಾರ್ಯಾಗಾರ

34
Published on

ಮೈಸೂರು: ಜಯಲಕ್ಷ್ಮಿಪುರಂನಲ್ಲಿರುವ ಮಹಾಜನ ಪ್ರೌಢಶಾಲೆ ಸಭಾಂಗಣದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಉದ್ಯೋಗ್ ಭಾರತಿ ಮೈಸೂರು ವಿಭಾಗದ ಸಹಯೋಗದೊಂದಿಗೆ ಸೋಮವಾರ ಜೇನು ಕೃಷಿಕರ ಕಾರ್ಯಾಗಾರ ಆಯೋಜಿಸಲಾಗಿತ್ತು.

ಕಾರ್ಯಾಗಾರ ಉದ್ಘಾಟಿಸಿದ ಲಘು ಉದ್ಯೋಗ್ ಭಾರತಿ ಉಪಾಧ್ಯಕ್ಷೆಯಾದ ನೇಚರ್ ಫ್ರೆಶ್ ಆ್ಯಂಡ್ ನಮನ್ ಸಂಸ್ಥಾಪಕಿ ಛಾಯಾ ನಂಜಪ್ಪ ಮಾತನಾಡಿ, ಕಡಿಮೆ ಬಂಡವಾಳ ಹೂಡಿಕೆಯಲ್ಲಿ ದೊಡ್ಡಮಟ್ಟದ ಲಾಭಪಡೆಯಲು ಜೇನು ಕೃಷಿ ಸಹಕಾರಿಯಾಗಿದೆ. ಗುಣಮಟ್ಟದ ಜೇನು ಉತ್ಪಾದನೆಗೆ ವಿಶ್ವದೆಲ್ಲೆಡೆ ಬೇಡಿಕೆ ಇದೆ ಎಂದರು.

ಜೇನನ್ನು ಆಹಾರ ಪದಾರ್ಥದಿಂದ ಹಿಡಿದು ಔಷಧಗಳ ತಯಾರಿಕೆಗೂ ಬಳಕೆ ಮಾಡಲಾಗುತ್ತದೆ. ಜಾಮ್, ಗುಲ್ಕನ್, ಸೇರಿದಂತೆ 24 ಬಗೆಯ ಜೇನಿನ ಪ್ರಾಡಕ್ಟ್‌ಗಳನ್ನು ಇದುವರೆಗೆ ಮಾರುಕಟ್ಟೆಯಲ್ಲಿ ತರುವಲ್ಲಿ ಯಶಸ್ವಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ 250 ಜೇನು ಉತ್ಪಾದಿಸುವ ಗುರಿ ಹೊಂದಿರುವುದಾಗಿ ಛಾಯಾ ಹೇಳಿದರು.

ಜೇನು ಕೃಷಿ ಆರಂಭಿಸಿದ ಕೆಲ ದಿನಗಳಲ್ಲಿಯೇ ದೊಡ್ಡದಾಗಿ ಬೆಳೆಯಲು ಸಾಧ್ಯವಿಲ್ಲ. ಹಂತ ಹಂತವಾಗಿ ಅದರಲ್ಲೂ ಗುಣಮಟ್ಟ ಕಾಯ್ದುಕೊಂಡಂತೆ ಬೇಡಿಕೆಯೂ ಹೆಚ್ಚಾಗುತ್ತದೆ. ಮೊದಲು ಸಂಬಂಧಪಟ್ಟ ಇಲಾಖೆಗೆ ಭೇಟಿ ನೀಡಿ, ಜೇನು ಕೃಷಿಯ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಹೊರದೇಶಗಳಿಗೆ ಜೇನು ರಪ್ತು ಮಾಡಬಹುದು. ಆದರೆ ಅಷ್ಟು ಸುಲಭವೂ ಅಲ್ಲ. ಕಲಿಕೆ ಇಲ್ಲಿ ಮುಖ್ಯವಾಗಿದೆ ಎಂದವರು ಹೇಳಿದರು.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಲ್.ಮದನ್‌ಕುಮಾರ್ ರೆಡ್ಡಿ ಮಾತನಾಡಿ, ಗಾಂಧೀಜಿ ಸ್ವರಾಜ್ಯ ಪರಿಕಲ್ಪನೆ ಆಧಾರರ ಮೇಲೆ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಕೆಲಸ ಮಾಡುತ್ತಿದೆ ಎಂದರು.

ನಿರುದ್ಯೋಗಿಗಳು ಅದರಲ್ಲೂ ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿ ಜೀವನ ಸಾಗಿಸಲು ಜೇನು ಕೃಷಿ ಅನುಕೂಲ ಕರವಾಗಿದೆ. ಚಿಕ್ಕದಾಗಿ ಆರಂಬಿಸಿ, ದೊಡ್ಡ ಉದ್ಯಮವಾಗಿಸಿಕೊಳ್ಳಬಹುದಾಗಿದೆ ಎಂದು ಮದನ್‌ಕುಮಾರ್ ರೆಡ್ಡಿ ತಿಳಿಸಿದರು. ಶ್ರೀಗಂಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜ್ ಕಾಮಯ್ಯ ಮಾತನಾಡಿ, ಜೇನು ಸಾಕಣೆಯಿಂದ ಅನೇಕ ರೈತರು ಬದುಕುತ್ತಿದ್ದಾರೆ. ಜೇನು ರೈತ, ರೈತರನ್ನು ಬಿಟ್ಟು ಜೇನು ಇಲ್ಲವೆಂಬಂತೆ ನಿಸರ್ಗದ ನಿಯಮ ಇದೆ.

ಇಂದು ಎಲ್ಲದಕ್ಕೂ ಜೇನು ಬೇಕು. ಸೌಂದರ್ಯಕ್ಕೆ, ಆರೋಗ್ಯಕ್ಕೆ, ಔಷಧಗಳ ತಯಾರಿಕೆಗೆ ಇದರ ಅವಶ್ಯವಿದೆ. ಜೇನು ಸಾಕಣಿಕೆಯಿಂದ ಸಾವಿರಾರು ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬೆಳೆಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕೆ ನಿರ್ದೇಶಕ ಬಸವರಾಜ, ಮೈಸೂರು ವಿಭಾಗದ ಮುರಳೀಧರ ಭಾಗವತ್, ಜೈನು ಕೃಷಿಕ ಮಧುಕೇಶ್ವರ ಹೆಗಡೆ, ಖಾದಿ ಮತ್ತು ಗ್ರಾಮೋದ್ಯೋಗ ಸಹಾಯಕ ನಿರ್ದೇಶಕ ಎಂ.ಲಿಂಗಾದೊರೈ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net