

ಮಡಿಕೇರಿ:
ಜೇನು ಕುರುಬರ ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ಕಾಳಜಿವಹಿಸುವಂತೆ ಕೋರಿ ಸಮುದಾಯದ ನಿಯೋಗ ಗುರುವಾರ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು. ಜೇನುಕುರುಬ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಸ್ವತಂತ್ರ ಪೂರ್ವದಿಂದಲೂ ಈ ಸಮುದಾಯ ತುಳಿತಕ್ಕೆ ಒಳಗಾಗಿದೆ. ಪ್ರಮುಖವಾಗಿ ಜೇನುಕುರುಬ ಸಮುದಾಯಕ್ಕೆ ಉತ್ತಮ ಗುಣಮಟ್ಟದ ಶಿಕ್ಷಣ, ಹುಣಸೂರು ತಾಲೂಕಿನಲ್ಲಿ ಜೇನುಕುರುಬರ ಕಚೇರಿಯನ್ನು ಮರುಸ್ಥಾಪಿಸಿ ಪಿವಿಟಿಜಿ ಅನುದಾನವನ್ನು ಜಿ.ಕೆ. ಕಚೇರಿಯ ಮೂಲಕವೇ ಸಮುದಾಯಕ್ಕೆ ತಲುಪಿಸಬೇಕು.
ಅರಣ್ಯ ಹಕ್ಕು ಕಾಯ್ದೆ ೨೦೧೨ರ ತಿದ್ದುಪಡಿ ಕಾಯ್ದೆ ಪ್ರಕಾರ ಒಂದೊಂದು ಕುಟುಂಬಕ್ಕೆ ತಲಾ ೫ ಎಕರೆ ಕೃಷಿ ಭೂಮಿ ಮಂಜೂರು ಮಾಡಬೇಕು ಎಂದು ಮನವಿ ಮಾಡಿಕೊಳ್ಳಲಾಯಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ನೇತೃತ್ವದಲ್ಲಿ ತೆರಳಿದ ನಿಯೋಗದಲ್ಲಿ ಕೊಡಗು ಜಿಲ್ಲಾ ಜೇನು ಕುರುಬರ ಸಂಘದ ಉಪಾಧ್ಯಕ್ಷೆ ಜಿ.ಕೆ.ಮುತ್ತಮ್ಮ ಮತ್ತು ಸಂಘದ ಪದಾಧಿಕಾರಿಗಳು ಇದ್ದರು.